ಮಂಗಳವಾರ, ಡಿಸೆಂಬರ್ 13, 2011

ಬೃಂದಾವನ-2.


                     ತಂಪು ಕೊಡುವ ಮರವು ಬರಿದಾಗುವಿಕೆಯನ್ನೇ ಕಾಯುತ್ತಿರುವಂತಿದ್ದ ಚಿಂತೆಯೆಂಬ ದೆವ್ವವು, ಚಿತೆಗೆ ಬೆಂಕಿಗಾಹುತಿ ನೀಡಲು ಅಣಿಮಾಡತೊಡಗಿತು ವಸುದೇವನ ದೇಹವನ್ನು. "’ನಿನ್ನ ಪಾದತಳದ ಧೂಳಿನ ಸ್ಥಳದಲ್ಲಿ ನನ್ನ ಕಂದಮ್ಮಗಳನ್ನಿರಿಸುವೆ, ದಯವಿರಲಿ ನಮ್ಮಲ್ಲಿ. ಬದುಕಿಸು ನಮ್ಮನ್ನು’ ಎನ್ನುತ್ತಾ ಪರಿ-ಪರಿಯಾಗಿ ಬಾವನ ಪದತಲದಲ್ಲಿ ಬೇಡಿ ಬದುಕಿಕೊಂಡೆವು. ಯಾವ ಪುರುಷಾರ್ಥದ ಸಾಧನೆಗೆ? ಹುಟ್ಟಿ, ಬೆಳೆದು, ಜಗದ ಸೌದಂರ್ಯವನ್ನೆಲ್ಲಾ ಕಣ್ಣೊಳಗಿನ ಗೋಲದಲ್ಲಿ ತುಂಬಿ, ವಿದ್ಯೆಯೆಂಬ ಶಾರದೆಯನ್ನ ನಾಲಿಗೆಯ ಮೇಲೆ ನಲಿಸಿ, ಅರಿಯ ರಕುತದಲ್ಲಿ ಶೌರ್ಯದಿಂದ ಬಸಿದ ಬೆವರು ತೊಳೆಸಿ,  ನೀರೆಯ ಸೀರೆಯ ನೆರಗು; ಅಂಚು ಕಾಣದಂತೆ ಮಾಡಿ, ಸೂರ್ಯಸದೃಶಕ್ಕೆ ಯದುಕುಲದ ಪತಾಕೆಯ ಹಾರಿಸಿ, ಕೊನೆಯ ಕಾಲದ ನಾರುಬಟ್ಟೆಯ ಶಾಂತ್ಯುದರಕ್ಕೆ ಆಹಾರವಾಗಬೇಕಿದ್ದ ಕಂದಮ್ಮಗಳೆಲ್ಲಾ, ಪೃಥಿವಿಯನ್ನ ಆಘ್ರಾಣಿಸುವುದರೊಳಗೇ, ಗೋಡೆಗೆ ಶಿರವ ಬಡಿಸಿ, ನೆತ್ತರನ್ನೆಲ್ಲಾ ಸೆರೆಯ ಕಂಭಿಕಳಿಗೆ ಅಭಿಶೇಕಿಸಿ, ಕೇಳಲಾಗದೇ ಇದ್ದರೂ, ಕಿವಿಗೆ ಬಂದು ಬಡಿಯುವ ಆ ಆಕ್ರಂದನ, ನಿದ್ರಾದೇವಿಗೆ ಬರದಂತೆ ನೀಡಿದ ಕಟ್ಟಪ್ಪಣೆಯಂತಿದ್ದು, ಘಳಿಗೆಯ ಸಮಾಧಾನತೆಯನ್ನೂ ದೂರ ಮಾಡಿಬಿಟ್ಟಿದೆ. ಯಾಕೆ ಬೇಕಿತ್ತು ಈ ಜನುಮದ ನರಕ? ಕಂಸನ ಓರೆಯನ್ನು ಬಿಟ್ಟ ಕತ್ತಿ, ಪತ್ನಿಯ ಕತ್ತಿನ ರುಚಿಯನ್ನ ನೋಡುವ ದೆಸೆಯಿಂದ ಮೇಲೇರಿದಾಗ ನನ್ನೆದೆಯಾದರೋ ಸಡ್ಡುಹೊಡೆದು ನಿಂತಿದ್ದರೆ, ವೀರಸ್ವರ್ಗವನ್ನಾದರೂ ಏರಬಹುದಿತ್ತೇನೋ!? ಎಂದಿನವರೆಗೆ ಬೆಳಕಿಗೆ ಹೆದರಿ ಓಡುವ ಹೇಡಿ ಕತ್ತಲಲ್ಲಿ ಮರೆಯಾಗಿನಿಲ್ಲುವುದು?" ಎನ್ನುವ ಪರಿತಾಪದಿಂದ ದಹಿಸುತ್ತಿರುವ ಮನವು ಒಂದೇಸವನೆ ಚಡಪಡಿಸುತ್ತಿದ್ದರೆ, ತೊಡೆಯನ್ನು ಆಶ್ರಯಿಸಿದ ದೇವಕಿಯ ನಿದ್ದೆಗೆ ಎಲ್ಲಿ ಭಂಗತರುವುದೋ ಎನ್ನುವ ಕಾರಣಕ್ಕೆ ದೇಹವು ಅಲುಗಾಡದೇ ಕುಳಿತಿತ್ತು.

                     ಕಾಲವು ತಾನು ಯಾರಪ್ಪಣೆಗೂ ಕಾಯದೇ ಆ ರಾತ್ರಿಯ ಮುಸುಕನ್ನ ತೊರೆದು, ಬೆಳ್ಳನೆಯ ಬೆಳಕಿನ ಹಾಸಿಗೆಗೆ ಹೊರಳಲು ಅಣಿಯಾಗುತಿತ್ತು. ರಾತ್ರಿಯೇ ವಸುದೇವನಲ್ಲಿ ಚರ್ಚಿಸಿ, ಕೈ-ಗೊಂಡ ನಿರ್ಧಾರದತ್ತ ಕಾರ್ಯೋನ್ಮತ್ತರಾಗಿದ್ದರು ಗರ್ಗರು. ಸೀದಾ ರೋಹಿಣಿಯಿರುವಲ್ಲಿ ತೆರಳಿ, ವಸುದೇವನ ಮನದಿಂಗಿತವನ್ನ ಅವಳಲ್ಲಿ ತಿಳಿಸಿ, ಗೊಲ್ಲತಿಯರ ವೇಷವನ್ನ ಧರಿಸುವಂತೆ ತಿಳಿಸಿ, ಬೆಳ್ಳಂ ಬೆಳಗ್ಗೆನೇ ಗೋಕುಲದಿಂದ ಹಾಲು, ಮೊಸರು, ಬೆಣ್ಣೆ ಮಾರಲು ಬರುವ ಗೊಲ್ಲ ಸ್ತ್ರೀಯರಲ್ಲಿ, ಅವಳನ್ನೂ ಯಾರಿಗೂ ಅನುಮಾನಬಾರದಂತೆ ಮಥುರಾ ನಗರವನ್ನ ಬಿಡಲು ಸಕಲ ಏರ್ಪಾಡುಗಳನ್ನೂ ಮಾಡಿಸಿದರು. ಹಾಗೇ ನಗರವನ್ನ ಬಿಟ್ಟ ಗೊಲ್ಲತಿಯರ ಸಮೂಹ ಯಮುನಾ ನದಿಯನ್ನ ದಾಟಿತು.


                  ಹಿಮೇಶ್ವರನು ನದಿಯಾಗಿ ಹರಿದು, ಎಲ್ಲರ ತನು, ಮನವನ್ನ ತಣ್ಣಗೆ ಇರಿಸುತ್ತಿರಲಾಗಿ, ತಾನು ಇನ್ನೊಂದು ರೂಪವನ್ನ ಧರಿಸಿ, ಮುಕ್ಕೋಟಿದೇವತೆಗಳು ಆಶ್ರಯಿಸಲ್ಪಟ್ಟು ಪೂಜಿಸಲ್ಪಡುವ ಗೋ-ಮಾತೆಯ ಕೆಚ್ಚಲಿನಲ್ಲಿ ಹರಿದು, ಹಸು-ಗೂಸುಗಳಿಗೆ, ಚಪಲಚಿತ್ತ ನಾಲಿಗೆಗೆ ನಾ ನಾ ವಿಧಗಳಲ್ಲಿ ರುಚಿಯನ್ನ ಉಣುಬಡಿಸುತಿದ್ದನು ಆ ಊರಿನಲ್ಲಿ.
ಗೋವರ್ಧನ ಗಿರಿಯ ತಪ್ಪಲಿನಲ್ಲಿ ಬೆಳೆದು ನಿಂತ ಹಸಿ-ಹಸಿ ಹಸಿರು; ತಾನು ಏನೂ ನಿನಗೆ ಕಮ್ಮಿ ಇಲ್ಲ ಎನ್ನುವಂತೆ ದಷ್ಟಪುಷ್ಟತೆಯನ್ನ ಹಸುವಿಗೂ ನೀಡಿ, ಹಿಂಡಲ್ಪಟ್ಟು, ಕಸುವಿನಿಂದ ಕೂಡಿದ ರಟ್ಟೆಯಲ್ಲಿ ಹೋಗಿ ಆಶ್ರಯಿಸುತ್ತಿದ್ದವು ಆ ಊರಿನ ಜನರಲ್ಲಿ. ಮಾಂದಾರ,ಮಲ್ಲಿಗೆ, ಕ್ಯಾದಿಗೆ, ಪಾರಿಜಾತಾದಿ ಪುಷ್ಪಗಳು ತಮ್ಮ ಸೌಗಂಧಬರಿತ ಉಸಿರಾಟ ಸಗಣಿಯ ವಾಸನೆ ಹತ್ತಿರ ಸುಳಿಯದಂತೆ ಮಾಡುತ್ತಿದ್ದವು. ಕಿನ್ನರ-ಕಿಂಪುರುಷರ ಸುಮಧುರ ಧನಿಗಳು ಹಾಡಿ, ನಲಿಯುತ್ತಿರುವ ಗೊಲ್ಲರ ವೇಷದಲ್ಲಿ ಸುತ್ತುತ್ತಿದ್ದರೆ, ಪಕ್ಷಿಗಳೆಲ್ಲಾ ಹಿಮ್ಮೇಳನಕ್ಕೆ ತಮ್ಮ ಧನಿಗಳನ್ನ ಸೇರಿಸಿ ಕಳೆಕಟ್ಟುತಿದ್ದವು. ಕೆಂಪಾದ ಕೆಮ್ಮಣ್ಣು ಅಲ್ಲಿನ ಗೋಡೆಗಳಲ್ಲಿ ಬಳಿಯಲ್ಪಟ್ಟು, ಅದರ ಮೇಲೆ ಚಿತ್ತಾರವಾಗಿನಿಂತ ಶೇಡಿ ಪ್ರತಿಯೊಂದು ಮನೆಯನ್ನೂ ಕಲ್ಯಾಣ ಮಂಟಪೋಪಾದಿಯಲ್ಲಿ ಸಿಂಗರಿಸಿದ್ದವು. ಅವುಗಳಲ್ಲಿ ನೋಡಿದರೆ, ಜಗವನ್ನೇ ಮರೆಸುವ, ಅಲಂಕಾರವೇ ವಿಹರಿಸುವ ನೆವವೊಡ್ಡಿ, ಕಿಲ-ಕಿಲ ನಗುವಿನೊಡನೆ, ಸ್ವರ್ಗವನ್ನೇ ಧರೆಗಿಳಿಸಿ, ಅಪ್ಸರೆಯರ ಸಮೂಹವೇ ನೆರೆದಂತೆ, ನೆರೆತ ಮಂದಾಕಿನಿಯರು ನಲಿದಾಡುತ್ತಿದ್ದರಲ್ಲಿ.  ಆಡುತ್ತಾ, ಛೇಡಿಸುತ್ತಾ ದನ-ಕರುಗಳೊಡನೆ, ಸಂಜೆಗೆ ಮನೆ ಹಿಂತಿರುಗುತ್ತಿರುವ ಗೊಲ್ಲಹುಡುಗರ ಕುಚೇಷ್ಟೆಯನ್ನ ಕೇಳಿ, ಸೂರ್ಯನೂ ಕೂಡ ತನ್ನ ರಂಗನ್ನ ಮುಖದತುಂಬಾ ತುಂಬಿಕೊಂಡು, ರಸಿಕರ ನೋಟಕ್ಕೆ ನೀರಾದ ನೀರೆಯ ಮೊಗದಂತೆ ಮುಖಮಾಡಿಕೊಂಡು ಪಶ್ಚಿಮದಲ್ಲಿ ಕರಗುತ್ತಿರಲಾಗಿ,    ನಂದಗೋಕುಲವನ್ನ ಪ್ರವೇಶಿಸಿದರು ಗೊಲ್ಲತಿಯರು.

                        ಮೊದಲೇ ಆಗಮಿಸಿದ ಗರ್ಗರು, ಆ ಸಮೂಹದಲ್ಲಿದ್ದ ರೋಹಿಣಿಯನ್ನ ನಂದ-ಯಶೋಧರಿಗೆ ಪರಿಚಯಿಸಿ, ಅವಳ ಹಾಗು ಅವಳ ಉದರವನ್ನಾಶ್ರಯಿಸಿದ ಮಗುವಿನ ಯೋಗಕ್ಷೇಮವನ್ನ ಅವರ ಕೈಗಳಿಗೆ ಹಸ್ತಾಂತರಿಸಿ, " ನೀವೇನು ಭಯಪಡುವ ಅವಶ್ಯಕತೆ ಇಲ್ಲಾ ಆಚಾರ್ಯರೇ, ನನ್ನ ಸ್ನೇಹಿತನ ಪತ್ನಿಗೆ ಏನೂ ಕುಂದು-ಕೊರತೆಗಳು ಬಾರದಂತೆ ಸಲಹುತ್ತೇವೆ" ಎನ್ನುವ ವಾಗ್ದಾನವನ್ನ ಪಡೆದು, ಒಂದು ಜೀವ ಉಳಿಸಿದ ನೆಮ್ಮದಿಯ ಉಸಿರನ್ನ ರೋಹಿಣಿಯಲ್ಲಿ ಆಶೀರ್ವಾದ ರೂಪದಲ್ಲಿ ಬಿಟ್ಟು ಹಿಂತಿರುಗಿದರು. ಶಾಂತ ಚಿತ್ತದ ರೋಹಿಣಿಯು ತನ್ನ ಪ್ರಸವದ ದಿನಗಳನ್ನ ಎದುರು ನೋಡುತ್ತಾ ಹಾಯಾದ ಘಳಿಗೆಗಳನ್ನ ಆ ಊರಿನಲ್ಲಿ ಕಳೆದು, ನವ ಮಾಸಗಳನ್ನೂ ದಾಟಿಬಿಟ್ಟಳು. ಆದರೆ, ಅನುದಿನವೂ ರಾತ್ರಿಯ ನಿದ್ದೆಯ ಸಮಯದಲ್ಲಿ, ತನ್ನ ಯೋಗಕ್ಷೇಮವನ್ನ ನೋಡಿಕೊಳ್ಳಲು  ಸಹಸ್ರ-ಸಹಸ್ರ ಮುಖಗಳ ಹೆಡೆಗಳನ್ನ ಚಾಚಿ, ಬಸುರಿಯ ಮೊದ್ದು ಮುಖವನ್ನೇ ನೊಡುತ್ತಾ ಕುಳಿತಿರುವ ಸರ್ಪವು  ಗಮನಿಸುತ್ತಿರುವಂತೆ ಆಗುವ ಅನುಭವವನ್ನ ಅವಳು ಯಾರಲ್ಲಿಯೂ ತಿಳಿಸಲೇ  ಇಲ್ಲಾ!

                   ಈಕಡೆ ಮಾತ್ರಾ ಮಥುರಾ ನಗರಾಧಿಪತಿಯನ್ನ, ಅರೆನಿದ್ದೆಯ ಕನಸಿನಲ್ಲಿ ತಾನು ಮಾಡಿದ ಪಾಪವೆಲ್ಲಾ   ಹಾವಿನ ರೂಪವ ತಾಳಿ, ಅದರ ಬಾಲವೆಂಬ ಉರುಳಿಗೆ ಸಿಕ್ಕಿಬಿದ್ದು, ಉಸಿರುಗಟ್ಟಿದ ಅನುಭವವನ್ನ ಪಡೆಯುತ್ತಾ, ಬೆಚ್ಚಿಬೀಳಿಸುತ್ತಾ ಎಬ್ಬಿಸಿಬಿಡುವಂತೆ ಮಾಡುತಿತ್ತು ಆ ಹಾವು!!  ಹಾಗೇ ಆ ದಿನವೂ, ಕೆಮ್ಮುತ್ತಾ , ದಡ್ಡನೆ ಎದ್ದು ಕುಳಿತ ಕಂಸ. ರಾಜವೈದ್ಯರಿಂದ ತಿಳಿಸಲ್ಪಟ್ಟಂತೆ, ಈ ದಿನ ದೇವಕಿಯ ಸಪ್ತಮ ಗರ್ಭ ಇಳಿಯುವ ದಿನ, ಎನ್ನುವುದನ್ನ ನೆನಪಿಗೆ ತಂದುಕೊಳ್ಳುತ್ತಾ, ಗರ್ಭಸ್ರಾವ ಆಗಿರುವ ವಿಚಾರ ತಿಳಿಯದೇ ಇರುವ ಅವನು, ಸೇವಕರು ತರುವ ವಾರ್ತೆಗಾಗಿ ಕಾಯುತ್ತಾ ಕುಳಿತಾದವನಾದ!


ಮುಂದುವರೆಯುತ್ತದೆ......

ಬುಧವಾರ, ಡಿಸೆಂಬರ್ 7, 2011

ಬೃಂದಾವನ- 1.


                     ಕಾರ್ಮುಗಿಲನ್ನೆಲ್ಲಾ ಮರೆಯಾಗಿಸಿ ಕರಿಮೋಡವು, ವಾರಿಧಿಯ ಜಲವನ್ನೇಲ್ಲಾ ಜಗಚ್ಛಕ್ಷುವಿನಾ ಬಿಸಿನೊಟದಿಂದ ಹೀರಿ, ದ್ರುಮಿಲಕುಮಾರನ ಮಂಗಾಟದಿಂದಾ ಬೆದರಿ ಓಡುತ್ತಿರುವ ರಸ-ಋಷಿಗಳ ಎದುರುಸುರಿಗೆ ಹಾರಿ, ಜಗದುಸುರಿನ ಹಸಿರು ತೋರಣದಾ, ಮುಗಿಲೆತ್ತರಕೆ ಮೊಗವಹೂಡಿ ನಿಂತ ಹಿಮಶಿಖರದಾ ತಂಪು-ತಪ್ಪಲಿಗೆ ನಡುಗಿ, ತರ-ತರ ಗುಡುಗಿ, ಏನು ಮಾಡಬೇಕೆಂದರಿಯದೇ ಮುಗ್ಧಮಗುವಿನಾ ಕಣ್ಣೀರಧಾರೆಯಂತೆ ಒಂದೇಸವನೆ ಕರಗಿ ನೀರಾಗಿ ಆರ್ಯಾವರ್ತವನ್ನ ತೋಯಿಸುತಿತ್ತು. ಬಿದ್ದ ಜಲ, ಭೂ-ತಾಯಿ, ಪತಿಯ ಆಣತಿಗೆ ಹೆದರಿ ಒಡಲಿಗೆ ಸಾಗಿಸಿ,ರಕ್ಕಸರ ಕೂಟದ ಅಟ್ಟಹಾಸದ  ಬಾಯಾರಿದ ಕೆಂಪುನಾಲಿಗೆಗೆ ಆಹಾರವಾಗಿ ಎಲ್ಲಿ ನೀಡುವುದೋ ಎಂದು ಬೆದರಿ, ಕಪ್ಪು ಪಾತಾಳದಾ ನರಕ ಭಯದಿಂದ ಒಂದೇಸವನೇ ಸಿಕ್ಕ-ಸಿಕ್ಕ ಕೊರಕಲ್ಲೆಲ್ಲಾ ಹರಿದಾಡಿ ಯಮುನೆಯ ಒಡಲಸೇರಲು ಧಾವಿಸುತಿದ್ದವು. ನೊರೆಬೆಳ್ಳಗೆ ಹರಿಯುತ್ತಿರುವ ಹಿಮಪುತ್ರಿಯಾದರೋ ಹಸುಗೂಸಿನ ಎಳೆರಕುತದಾ ಬಣ್ಣಕ್ಕೆ ತಿರುಗುವ ಭೀತಿಗೆ ಭೆದರಿ, ಬೆಂಡಾಗಿಯಾದರೂ ತಪ್ಪಿಸಿಕೊಂಡರೂ... ತನ್ನನ್ನೇ ಆಶ್ರಯಿಸಿ ನಿಂತ ಮಥುರಾ ಪಟ್ಟಣದತ್ತ ತಿರುಗಿಯೂ ನೋಡದೇ ತನ್ನಾಂತಿಮ ಗುರಿಯತ್ತ ತಣ್ಣಗೆ ಸಾಗುತಿತ್ತು. ಪುಟ್ಟ-ಪುಟ್ಟ ದೇಗುಲದಂತಿರುವ ಮನೆಯಿದ್ದರೂ, ಸೆರೆಮನೆಯಂತಿರುವ, ಎಳೆಮಗುವಿನ ಬೇಲಿದಾಟಿದಾ ನಗುವಿನ ಸದ್ದನ್ನ ಮರೆತೇ ಹೋದಾ ಆ ನಗರವು, ಕಂಸನ ಭಯದಿಂದ ನಡುಗುತ್ತಾ, ಕಂದಮ್ಮಗಳ ರಾತ್ರಿಯ ಅಳುವನ್ನ ಅವನ ಕಿವಿಗೆ ತಾಕದಂತೆ ಎಚ್ಚರವಹಿಸುತ್ತಾ, ನಿದ್ದೆಗೆಟ್ಟೋ ಅಥವಾ ರಾಜನ ಮೇಲಿನ ಉಗ್ರಕ್ಕೋ ಕಡು ಕೆಂಪಾದ ಕಣ್ಣುಗಳಿಂದ  ಕೂಡಿದ  ಪುರಜನರಿಂದ ಕಡುರಾತ್ರಿಯಲ್ಲಿ ತನ್ನಿರುವಿಕೆಯನ್ನ ನೆನಪಿಸುತಿತ್ತು. ಸುಖದ ಸುಪ್ಪತ್ತಿಗೆಯ ಮೇಲೆ ಹಾಯಾಗಿ ಮಲಗಿದ ಕಣ್ಣು, ಮುಚ್ಚಿ ಮಲಗಿದ್ದರೂ, ಸಾವಿನಾಂಜಿಕೆಯ ಮನವು,  ಒಡಹುಟ್ಟಿದ ದೇವಕಿಯ ಗರ್ಭದ ಪ್ರಸವದ ನೋವಿನ ನರಳುವಿಕೆಗೆ ಕಾತರಿಸುತ್ತಾ ಕಿವಿಯನ್ನಾ ಎಚ್ಚರವಾಗಿಸಿಯೇ ಇತ್ತು. ರಾಜನಾಗಿ ಮೆರೆಯಬೇಕಿದ್ದ ತನ್ನ ಪತಿರಾಯನಾದ ವಸುದೇವನ ದೆಶೆಯನ್ನ ಹಳಿಯುತ್ತಾ, ಹುಟ್ಟಿ ಕ್ಷಣವಾಗದೇ ತನ್ನಾರೂ ಮಕ್ಕಳನ್ನ  ಕಳೆದುಕೊಂಡು, ತನ್ನ ಗರ್ಭವ ಆಶ್ರಯಿಸಿ ನಿಂತ ಏಳನೆಯ ಮಗುವಿನ ಭವಿಷ್ಯತ್ತಿನಲ್ಲಿ ಸಂಭವಿಸುವ ಕರ್ಮವ ನೆನೆಯುತ್ತಾ.   ಕಣ್ಣೀರುಹಾಕುತ್ತಾ, ನೊಂದ ಕಣ್ಣುಗಳಿಂದ ಪತಿಯನ್ನೇ ನೋಡುತ್ತಿದ್ದಳು. 
                                                                 ********************
                     
                   ಭಿರ-ಭಿರನೆ ವೇಗದಿಂದ ಬೀಳುತ್ತಿರುವ ಹೆಜ್ಜೆಗೆ ನಡುಗಿದ ಧೂಳುಗಳು ಪವಿತ್ರ ಪಾದಗಳಿಗೆ ದಾರಿಮಾಡಿಕೊಡುತ್ತಿದ್ದವು. ತಮ್ಮ ಆಪ್ತ ಗುಪ್ತಚರರಿಂದ ಕಿವಿಗೆ ತಾಕಿದ ವಿಷಯದಿಂದ, ಮನದಾಳದಲ್ಲೇ ಏಳುತ್ತಿರುವ ಆಲೋಚನೆಗೆ ಲಗಾಮು ಹಾಕುತ್ತಿರುವ ಮನಸ್ಸಿನ ಪ್ರಯತ್ನ ಒಂದು ಕಡೆ ಸಾಗುತ್ತಿದ್ದರೆ, ಕಣ್ಣು ಮುನ್ನೋಟದತ್ತ ತನ್ನ ಪ್ರಕಾಶವನ್ನ ಬೀರಲು ಪ್ರಯತ್ನಿಸುತ್ತಿತ್ತು. ನೆರೆತು ಬಿಳಿಯಾದ ಗಡ್ದ ಮೀಸೆ ಅವರ ಅನುಭವವನ್ನ ಸಾರಿ-ಸಾರಿನುಡಿಯುವಂತಿತ್ತು. ತನ್ನ ಪುರವನ್ನ ಕಾಪಾಡುವ ಮಾರ್ಗದತ್ತ ಸಾಗಿ ಹೋಗುವಂತಿತ್ತು ಅವರ ದೇಹ. ಅದು ತನ್ನ ಕಾರ್ಯವೂ ಹೌದೆಂದೂ ಗೊತ್ತಿತ್ತು. ಹಾಗೇ ಬರುತ್ತಿರುವ ಯಾದವರ ಕುಲಗುರುವಾದ ಗರ್ಗಾಚಾರ್ಯರನ್ನು ನೋಡಿದ ಕಾವಲುಗಾರರು ಗೌರವದಿಂದ ದಾರಿ ಬಿಟ್ಟು ನಿಲ್ಲುತ್ತಿದ್ದರು. ಗುರುಗಳು ಸೀದಾ ಪ್ರವೇಶಿಸಿದ್ದರು ವಸುದೇವ-ದೇವಕಿಯನ್ನಿರಿಸಿದ ಸೆರೆಯೊಳಗೆ. 


                    ಆಗತಾನೇ ವಸುದೇವನು, ಗರ್ಭಪಾತ ಆಗಲ್ಪಟ್ಟು ಉದರದ ಭಾರವನ್ನೆಲ್ಲಾ ಕಣ್ಣಿನಿಂದಲೇ ಕರಗಿಸಿಕೊಳ್ಳುತ್ತಿರುವ ತನ್ನ ಪತ್ನಿಯ ಕಣ್ಣೀರನ್ನ ಒರೆಸಿ, ಒದ್ದೆಯಾದ ಕೈಯನ್ನ-ಮನದಲ್ಲಿ ಏಳುತ್ತಿರುವ ಹೇಡಿತನದ ಬೆಂಕಿಯನ್ನ ಆರಿಸಲು ಪ್ರಯತ್ನಿಸುತ್ತಾ ಕುಳಿತಿದ್ದ. ತರಾ-ತುರಿಯಲ್ಲಿ ಪ್ರವೇಶಿಸಿದ ಕುಲಗುರುವನ್ನ ನೋಡಿ ಎದ್ದು ನಿಂತು ನಮಸ್ಕರಿಸಿದ. ಪ್ರತಿವಂದನೆ-ಆಶೀರ್ವದಿಸಿದ ಗುರುಗಳು, ತನ್ನ ಕಿವಿಗೆ ಬಿದ್ದ ದೇವಕಿಯ ಗರ್ಭಪಾತದ ವಿಷಯವನ್ನ ಖಾತ್ರಿಮಾಡಿಕೊಂಡು,ತಿಳಿಯಲ್ಪಟ್ಟ ರೋಹಿಣಿಯ ಗರ್ಭಧರಿಸಿದ ಸೂಕ್ಷ್ಮತೆಯನ್ನ ಐದನೆಯ ಕಿವಿಗೆ ಬೀಳದಂತೆ ತಿಳಿಸಿದರು. ಇದನ್ನ ಕೇಳಿದ ವಸುದೇವನ ಕಣ್ಣುಗಳು ಅರಳಿನಿಂತವು. ಒಂದು ಕಡೆ, ತನ್ನ ಕಣ್ಣೆದುರಿಗೇ ಮಕ್ಕಳನ್ನೆಲ್ಲಾ ಕಳೆದುಕೊಂಡು ಇಹ-ಪರದ ನರಕ ಭೀತಿಯಲ್ಲಿರುವಾಗ, ಗುರುಗಳಿಂದ ತಿಳಿಸಲ್ಪಟ್ಟ ವಿಷಯವು, ತನ್ನಾರೂ ನೋಡದೇ, ಒಂಟಿಯಾಗಿ ಕುಳಿತಿರುವಾಗ, ದೂರದಿ ದುಂಭಿಯ ಝೇಂಕಾರದ ಸದ್ದಿನ ಭ್ರಮೆ-ಭ್ರಮಿಸಿದಾಗ, ತಾನರಳಿದ ಸಾರ್ಥಕತೆಗೆ ನಲಿಯುವಂತಿರುವ ಹೂವಿನಂತ ಮನಸ್ಸಿಗೆ ಮಧುವನ್ನ ಚೆಲ್ಲಿದಂತಾಯಿತು. ಆ ಸಂತೋಷ ಹೆಚ್ಚುಹೊತ್ತುನಿಲ್ಲದೇ, ಮುಖದಲ್ಲಿ ಭೀತಿಯು ಆವರಿಸಿ ನಿಂತಿತು.
             ಅದನ್ನ ಗ್ರಹಿಸಿದ ಆಚಾರ್ಯರು, "ಹೌದು ವಸುದೇವ, ನಿನ್ನ ಆಲೋಚನೆಯ ಮಾರ್ಗ ಸರಿಯಾಗಿಯೇ ಇದೆ, ದೇವಕಿಯ ಗರ್ಭಪಾತವಾಗಿರುವಿಕೆ ಕಂಸನ ಕಿವಿಗೆ ತಲುಪಿ, ಅಭ್ಯಾಸವಾಗಿ ಹೋದ ಹತ್ಯೆಯ ಪ್ರವೃತ್ತಿಯ ದೃಷ್ಟಿ ರೋಹಿಣಿಯ ಮೇಲೆ ತಿರುಗುವ ಸಂಭವ ಇದ್ದೇ ಇದೆ" ಎನ್ನುವ ಮೂಲಕ, ಅವನು ಅರಿತದ್ದನ್ನ ಹೌದೆಂದು ತಲೆಯಾಡಿಸಿ ಅವನ ಮನದಲ್ಲಿ ಮೂಡಿದ ಆಲೋಚನೆಗೆ ಪುಷ್ಟಿಯನ್ನ ನೀಡಿದರು. ಇದರಿಂದ ಮತ್ತೂ ಭೀತಿಗೆ ಒಳಗಾಗಿ ವಸುದೇವನು ಇದಕ್ಕೆ ಪರಿಹಾರ ಏನೆಂಬಂತೇ ಅವರನ್ನೇ ದೃಷ್ಟಿಸುತ್ತಾ ನಿಂತ. 
               "ಹೆದರ ಬೇಡ. ರೋಹಿಣಿಯ ಗರ್ಭದ ವಿಷಯ ಇನ್ನೂ ಅವನಲ್ಲಿ ಹೋಗಿ ತಲುಪಿಲ್ಲ. ಇದಿನ್ನೂ ನಮ್ಮೊಳಗೆ ಮಾತ್ರಾ ಇದೆ. ಅಷ್ಟರೊಳಗೆ ಇದಕ್ಕೆ ಪರಿಹಾರವನ್ನ ಊಹಿಸಬೇಕಷ್ಟೇ! ನಿನ್ನ ಸ್ನೇಹಿತನಾದ ಗೋಕುಲದ, ನಂದನ ನೆನಪಿರಬೇಕಲ್ಲವೇ ನಿನಗೆ?" ಗರ್ಗರ ಪ್ರಶ್ನೆಗೆ, ಹೌದೆನ್ನುವಂತೆ ತಲೆಯಾಡಿಸಿದ ವಸುದೇವ. " ಹೌದು. ಅವರ ಮನೆಗೆ ಅವಳನ್ನ ಒಯ್ದು, ಬಿಡಲು ಆಲೋಚಿಸಿದ್ದೇನೆ" ಎನ್ನುತ್ತಾ, ಪುನಃ ಅವನತ್ತಲೇ ನೋಡಿದರು. 
               ಈ ಮಾತನ್ನ ಕೇಳಿ ಸ್ವಲ್ಪ ಸಮಾಧಾನ ಪಡೆದ ವಸುದೇವ ಕಂಸನಿಗೆ ಅನುಮಾನ ಬಾರದಂತೆ ಕರೆದೊಯ್ಯಲು ತಿಳಿಸಿ, ಚಿತ್ತ ಸಂತೋಷದಿಂದ ಆಚಾರ್ಯರನ್ನ ಬೀಳ್ಕೊಟ್ಟು, ಅತ್ತು-ಅತ್ತು ದಣಿದು, ನಿದ್ದೆಯಲ್ಲೇ ಕನವರಿಸುತ್ತಿರುವ ದೇವಕಿಯ ತಲೆಯನ್ನ ನಿಧಾನವಾಗಿ ಎತ್ತಿ, ತನ್ನ ತೊಡೆಯಮೇಲಿರಿಸಿಕೊಂಡು ಕಣ್ಣುಮುಚ್ಚಿ ಆಲೋಚಿಸುತ್ತಾ ಕುಳಿತ.  

                   
                                                                                                                            ಮುಂದುವರೆಯುತ್ತದೆ........


ಶುಕ್ರವಾರ, ಅಕ್ಟೋಬರ್ 14, 2011

ಮಾಯಾಂಗನೆ ೩- ತಪ್ಪಿದ ಲೆಕ್ಕಾಚಾರ....!!

                 ನಾಗಲೋಕವನ್ನೇ ಪ್ರವೇಶಿಸುವಂತೆ ಒಂದೇ ಓಟದಲ್ಲಿ ಓಡುತಿತ್ತು ಬಸ್ಸು. "ಡ್ರೈವರ್, ಯುವಕನಿರಬೇಕು" ಅಂದುಕೊಂಡೆ. ಮೋಡ ಹನಿಹಾಕುತ್ತಿರುವುದರಿಂದ ಕಿಟಕಿಗಳೆಲ್ಲಾ ಮುಚ್ಚಿದ್ದು, ಉಸಿರು ಕಟ್ಟಿಸುವ ಅನುಭೂತಿಯನ್ನುಂಟುಮಾಡುತಿತ್ತು. ಅಸಾಧ್ಯವನ್ನ ತಡೆಯಲಾರದೇ ಗಾಜನ್ನ ಸರಿಸಿದೆ. ತಟ್ಟನೆ ಮಳೆಯ ತುಂತುರು ಮಿಶ್ರಿತ ಗಾಳಿ ಮುಖಕ್ಕೆ ರಾಚಿ... ಹಾಯ್..! ಎನ್ನುವಂತೆ ಮಾಡಿತು.


           ಆ ತಂಪಿಗೇ ಮುಖವೊಡ್ಡಿದೆ......
        ಆ ಒಂದು ಕ್ಷಣ!! ಮನವು ಎಲ್ಲವ ಬಿಟ್ಟು ಶೂನ್ಯಕ್ಕೆ ಪ್ರವೇಶಿಸಿದಂತಾಯಿತು. ಅಲ್ಲಿ ನಾ ನಿರಲಿಲ್ಲ..,. ಏನೂ ಇರಲಿಲ್ಲ... ಅಮೂರ್ತ! ಇರುವುದು ಏನಾದರೂ ಇದ್ದರೆ ತಾನೇ ಅರಿಯುವುದು!? ಪ್ರಯತ್ನಿಸುವುದು! ಏರುವುದು! ಆ ಸಮಯ..... ಯಾವುದಕ್ಕೂ ವಿಲೋಮವಿಲ್ಲ. ಪರಮಸುಖ. ಹಿತ. ಆನಂದ. ತಿಳಿ. ಅದು ಭಾವವಲ್ಲ! ಭಾವಕ್ಕೆ ಯಜಮಾನ. ಜಾಯಮಾನಕ್ಕೆ ನಿಲುಕುವಂತದ್ದಲ್ಲ.ಲೆಕ್ಕವಿಲ್ಲ. ಆಚಾರವಿಲ್ಲ. ಲೆಕ್ಕಾಚಾರವೂ ಇಲ್ಲ. ಪ್ರೀತಿಯಲ್ಲ. ದಳ್ಳುರಿಯಲ್ಲ. ನಿಶಭ್ದವಲ್ಲ. ಶಭ್ದವಿಲ್ಲ. ಶಬ್ಧವೂ ಇಲ್ಲ. ಸ್ಥಿತಿಯಲ್ಲ. ತಿಥಿಯೂ ಅಲ್ಲ. ಜಾಡ್ಯವಲ್ಲ. ಬಯಕೆಯಿಲ್ಲ. ಬಾಯಾರಿಕೆಯಿಲ್ಲ. ಆಕಾಶ!!!




          "ಥೂ...!! ಮುಚ್ಚ್ರಿ ಕಿಡ್ಕೀನ. ಮಳೆನೀರೆಲ್ಲಾ... ಒಳನುಗ್ತಾ ಇದೆ..." ತಟ್ಟಿ ಎಚ್ಚರಿಸಿದಂತಾಯಿತು, ಹಿಂದಿನ ಸೀಟಿನಿಂದ ಬಂದ ಗೊಗ್ಗರು ಗಂಟಲಿನ ಧ್ವನಿ. ಪಟಪಟನೆ ಕಿಡಕಿಯ ಮುಚ್ಚಿಕುಳಿತೆ. ಅಲ್ಲಿಗೇ ನನ್ನ ಮನದ ಆ ಕಿಂಡಿಯೂ ಮುಚ್ಚಿದಂತಾಯಿತು.ಮತ್ತೆ ಮನದಾ ಸ್ಥಿತೆಗೆ ಹೋಗುವ ಪ್ರಯತ್ನಮಾಡಿದೆ... ಊ.. ಹೂಂ..!
          ಇನ್ನಿಲ್ಲಿರುವುದು ಲೆಕ್ಕಾಚಾರದಲ್ಲಿ ತೊಡಗಿರುವ ಅಂಕಿಗಳು ಮಾತ್ರಾ! ಭಾರತೀಯ... ಶೂನ್ಯವನ್ನೇ ಹೇಗೆ ಕಂಡುಹಿಡಿದಿರಬಹುದು! ಒಂದು ಕಲ್ಪನೆಗೆ ಬಂದಂತಾಯಿತು. ನಮ್ಮವರು ತಿಳಿಸಿದ್ದ ಶೂನ್ಯವೇ ಬೇರೆ! ತಿಳಿದದ್ದೇ ಬೇರೆ! ಅರಿತುಕೊಂಡಿರುವುದು ಮಾತ್ರಾ ಹೊರಗಿನಿಂದ ಬೀಸಿದ ಸೊನ್ನೆಯ ಮುಂದಿರುವ ಲೆಕ್ಕಾಚಾರವನ್ನ!  ಅಂಕಿಗಳಮುಂದೆ ಸುತ್ತುವ ಸೊನ್ನೆಯನ್ನು ಮಾತ್ರಾ!! ಬರೇ ಸೊನ್ನೆ!!!!


           ಬಸ್ಸು ಯಾವುದೋ ಪುಟ್ಟ ಪಟ್ಟಣದಲ್ಲಿ ನಿಂತು, ಹೊರಟಿದ್ದು ಈಗ ನನ್ನ ಗಮನಕ್ಕೆ ಬಂತು! ಮೊದಲಿಷ್ಟೂ ರಷ್ ಇಲ್ಲದ್ದು.. ಈಗ ಸುಮಾರು ಎಲ್ಲಾ ಸೀಟುಗಳು ತುಂಬಿದೆ. ಕಂಡೆಕ್ಟರ್ ಸಾಹೇಬ ಎಲ್ಲಾ ಸೀಟುಗಳ ಲೆಕ್ಕಾಚಾರದಲ್ಲಿ ತೊಡಗಿ, ಬ್ಯುಸಿಯಾಗಿದ್ದ. ಆತನನ್ನೇ ನೋಡುತ್ತಾ ನನ್ನ ಯೋಚನಾ ಲಹರಿಯೊಳಗೆ ನುಗ್ಗಿದೆ. ಈಗ ಬಸ್ಸೇ ನಾನಂತೆ ಅನಿಸತೊಡಗಿತು! ಹಿಂದೆ-ಮುಂದೆ ಓಡ್ಯಾಡುತ್ತಿರುವ ಆ ಕಂಡೆಕ್ಟರ್ ಮನಸ್ಸಾದ. ಪ್ರಯಾಣಿಕರೆಲ್ಲಾ (ಮನೋ)ವ್ಯಾಪಾರಿ(ರ)ಗಳು! ಡ್ರೈವರ್, ಹತ್ತಿರ ಹೋಗಿ ನೋಡದೆಂತೂ ಅರಿಯದ ಆತ್ಮ! ಕಂಡೆಕ್ಟರ್ ತನ್ನ ಲೆಕ್ಕಾಚಾರಾದ ವ್ಯಾಪಾರದಲ್ಲಿ ಬ್ಯುಸಿ-ಬ್ಯುಸಿ ಇದ್ದು ಬಿಟ್ಟಿದ್ದಾನೆ!! ವ್ಯಾಪಾರಿಗಳು ಹತ್ತಿಇಳಿಯುತ್ತಿರುವುದಷ್ಟೇ ಮಾಡುತ್ತಿದ್ದಾರೆ.... ಚಿಲ್ಲರೆ ಇರುವವರು, ಚಿಲ್ಲರೆ ಜನ, ಚಿಣ್ಣರು,ನೋಡಿ ನಗುವ ಮಂದಿ, ನಗಿಸುವ ವಂದಿಮಾಗಧರು, ಹಿರಿ-ಕಿರಿಯರು, ಕಿರಿ-ಕಿರಿ ಮಾಡುವವರು, ಟಿಕೆಟ್ ಕೊಳ್ಳುವವರು, ಟಿಕೆಟ್ ಇಲ್ಲದೇನೇಯೇ..... ನಡೆದುಬಿಡುವವರು! ಅಡ್ಡಕಸುಬಿನವರೂ, ಉದ್ದುದ್ದ ಕಸುಬಿನವರೂ, ಬಿದ್ದು-ಜೋತಾಡುವವರೂ,ಕುಳಿತು ಕೂರುವವರೂ..! ಸೆರಗು ಮುಚ್ಚಿರುವವರು, ಜಾರಿಸುವವರೂ!! ಲೂಸುಗಳು...! ಫುಲ್ ಟೈಟ್ ಗಳು!! ವಂದಾ ಎರಡಾ!!?? ಯಾರಿದ್ದರೇನು ತನ್ನ ವ್ಯಾಪರವನ್ನಾ ಮಾಡಿ-ಮುಗಿಸಲೇಬೇಕು!!! ಎಲ್ಲರ ಲೆಕ್ಕಾಚಾರ ಮುಗಿಸಲೇಬೇಕು. ಟಿಕೆಟ್ ಕೊಳ್ಳುವವರಿಗೆ ಟಿಕೆಟ್ ಕೊಡಬೇಕು!! ಸಮಯಾವಕಾಶ ನೋಡಿ ಚಿಲ್ಲರೆಯನ್ನ ಜೇಬಿಗಿಳಿಸಿ, ಲೆಕ್ಕಾನಾಚಾರಗೊಳಿಸಬೇಕು!! ಕತ್ರಿಯಲ್ಲಿ ಕೈ ಯಾಡಿಸಿ ಖಾಲಿಮಾಡಿ, ಖಾತ್ರಿಮಾಡಿಕೊಳ್ಳಬೇಕು.  ಇಲ್ಲದಿದ್ದರೆ ಚಿತ್ರವಿಲ್ಲದ ಗುಪ್ತ ನ ಕೈಗೆ ತುತ್ತಾಗಿ ದಂಡವೆನ್ನುವ ಕರ್ಮದ ಗಂಟನ್ನ... ಮತ್ತೊಂದು ಜನುಮದ ನಂಟಿನಲ್ಲಿ ಬಿಚ್ಚಿ ಹಳಸಿದನ್ನವನ್ನ ಉಣ್ಣಬೇಕಾಗಬಹುದು. ಬಸ್ಸೇ ನಾನಾದರೆ, ತೆರಳುವ ಮಾರ್ಗವನ್ನ, ಹತ್ತಿಸಿಕೊಳ್ಳುಬೇಕಾದ ಮಂದಿಯನ್ನ ವಿಚಾರಿಸಿಕೊಳ್ಳುತ್ತಿರಬೇಕು. ತುಕ್ಕಾಗಿ ನಿಂತಾಗ ನೆನಪುಗಳನ್ನ ಮಧುರವಾಗಿ ನೆನಪಿಸಿಕೊಳ್ಳುವಂತಿರಬೇಕೇ ಹೊರತು... ಗಬ್ಬು ನಾರಿಸುವಂತಿರಬಾರದು ಅಲ್ಲವೇ!?? ಈ ಯೋಚನೆಯ ಪ್ರಶ್ನೆಗೆ ಉತ್ತರ "ಹೌದು...." ಎನ್ನುವಂತೆ ನನ್ನ ತಲೆಯನ್ನೂ ಆಡಿಸುತ್ತಾ.... ಕೆಳಮಾಡಿ, ಮೇಲೆತ್ತಿದೆ......
           ಏತ್ತಿದ ತಲೆಯ ದೃಷ್ಟಿಕೆಳಮಾಡಲು ಬಿಡಲೇ ಇಲ್ಲಾ! ಹಾಗೇ ಸ್ಥಿರವಾಗಿ ನಿಲ್ಲಿಸಿಬಿಟ್ಟಿತು. ಜೊತೆ-ಜೊತೆಗೆ ನನ್ನೀ ಹೃದಯದ ಬಡಿತದ ಲೆಕ್ಕಾಚಾರವನ್ನೂ ತಪ್ಪಿಸುವಂತೆ ಮಾಡಿತೊಂದು ಆಕಾರ! . ಸರಿಯಾಗಿ ನನ್ನೆದುರಾಗಿ.... ಮಾಯಾಂಗನೆ ಕುಳಿತಿದ್ದಾಳೆ, ಡ್ರೈವರ್- ಹಿಂಭಾಗದಲ್ಲಿದ್ದ ಹಿಮ್ಮುಖಮಾಡಿಕುಳಿತುಕೊಳ್ಳುವ ಸೀಟಿನಲ್ಲಿ!


          ಕತ್ತಲೆಂಬ ಬೆಳದಿಂಗಳ, ನಕ್ಷತ್ರಗಳ ಕಾಂತಿಯ ಸರೋವರದಲ್ಲಿ ಮಿಂದು, ಎದ್ದುಬಂದ ಹೊಂಬಣ್ಣವೇ ಮೈಯಾಗಿಸಿಕೊಂಡು ಎದ್ದುಬಂದಿರುವಳ್ತೋಂತಿದ್ದಳು, ಅವಳು. ಆ ಕಾಂತಿಗೆ ಮತ್ತೂ ಮೆರುಗನ್ನ ಕೊಡುತಿತ್ತು.... ಅವಳುಟ್ಟ ಆ ಕೆಂಪುಗುಲಾಬಿಯ ಬಣ್ಣದ ಸೀರೆ.
           ಮುಂದೆಲೆಯ ಒಂದಂಚಿನಲ್ಲಿ ಜಾರಿಸಿ ತೆಗೆಯಲ್ಪಟ್ಟ ಬೈ-ತಲೆ, ಕತ್ತಲೆಯ ಬಾನಿಗೆ ಮಿಂಚು; ಮಿಂಚಿನ ಕಾಂತಿಯ ನೀಡುವಂತಿತ್ತು. ತೆಳುವಿಶಾಲವಾದ ಅವಳ ಹಣೆಯಲ್ಲಿ, ಹರಡಿನಿಂತ ಬಾಳೆಯೆಲೆಯ ಮೇಲೆ ಬಿದ್ದ, ಬಾಳೇಯದೇ ಹೂವಿನಂತಿದ್ದ ಬಿಂದಿ ಕುಳಿತಿತ್ತು.
         ಹಗಲಿನಲ್ಲಿ ಕತ್ತಲೆಗೆ ಸ್ಥಳವಿಲ್ಲವೆಂದು ತಿಳಿದು, ಹಗಲಿನ ಬೆಳುಗನ್ನೇ ಪಟಲವನ್ನಾಗಿಸಿ, ಕತ್ತಲೆಯ ಕಪ್ಪು ಮಧುರತೆಯನ್ನೇ ಗೋಲಮಾಡಿ ಅಕ್ಷಿಪಟಲವನ್ನಾಗಿಸಿ ಮನಬಂದಂತೆ ಓಡಾಡಿಕೊಂಡಿರಲು ಬಿಟ್ಟಂತಿತ್ತು ಆ ಅವಳ ಕಣ್ಣುಗಳಲಿ. ತುಸು ಬಾಗಿದ, ಬ್ರಹ್ಮನಿಗೆ ತಪ್ಪಿದ ಲೆಕ್ಕಾಚಾರದಿಂದ ಗಿಣಿಯ ಕೊಕ್ಕನ್ನೇ ತಂದು ಇಲ್ಲಿ ಜೋಡಿಸಿದಂತಿತ್ತು.... ಆ ಅವಳ ಮೂಗು.




        ಇನ್ನು ಅವಳ ಆ ತುಟೀಗಳೋ........ ಆಗತಾನೇ ಅರಳಿದ ತೆಳುಗುಲಾಬಿಯ ಪಕಳೆಗಳೋ ಎಂದು ಭ್ರಮಿಸಿ, ಅದರ ಮೇಲೆ ಕುಳಿತು, ಸವಿತ್ರನ ಕಿರಣಗಳಿಗೆ ಮೈಯೊಡ್ಡಿ, ನವ-ನೂತನ ಪ್ರಭೆಯನ್ನ ಬೀರುವ ಆ ಬಿಂದುಗಳು..... ತಾನಾಗ ಬೇಕೆಂದು ಬಯಸಿ, ಸೋತು... ಮಳೆಯ ಹನಿಗಳು; ಕಣ್ಣೀರಿನಂತೆ ಮುಚ್ಚಿದ ಕಿಟಕಿಯ ಗಾಜಿನ ಮೇಲೆ ಬಿದ್ದು ಜಾರುವಂತೆ ತೋರುತಿತ್ತು.
        ಅದೇ ತರಣನ ಸಂಜೆಯ ಎಳೆಕಿರಣಕ್ಕೆ ಮಿರಿ-ಮಿರಿ ಮಿಂಚುತ್ತಿರುವ ಮೃದು ಮರಳಿನಂತಿರುವ ಅವಳ ಕಪೋಲವನ್ನ ನೋಡಿ , ಎಲ್ಲೋ ನುಗ್ಗಿದ ಗಾಳಿಯು; ಕಿಚ್ಚಿನಿಂದ ವಾರಿಧಿಯನ್ನ ದಡಕ್ಕೆ ತಂದೆರುಚವಂತೆ, ಅವಳ ಕೇಶರಾಶಿಯನ್ನೇ ತಂದೋಡ್ಡುತ್ತಿದ್ದ. ಆ ಅದನ್ನ ಸರಿಸಲು ಬರುವ ಅವಳ ಆ ಕೈ ತಾವರೆಯ ದಂಟಿನಂತಿದ್ದು, ಬೆರಳುಗಳು, ತಾವರೆ ಬಾಗಿ ಜಲವನ್ನ ತಾಕುವಂತೆ ಸವರಿ ನಿಲ್ಲುವಂತೆ ಕಾಣುತಿತ್ತು.
           ಅವಳು ಕುಳಿತಿರುವ ಭಂಗಿ, ಮೈ-ಮಾಟವೋ.... ಪರ್ವತಾಗ್ರದಿಂದ ಹುಟ್ಟಿ ಪಾದಾಂತದವರೆಗೆ ತಾನೆಷ್ಟು ವಯ್ಯಾರವಾಗಿ ಹರಿದರೆ ಚೆಂದಕಾಣೋವನೋ... ಎನ್ನುವುದನ್ನ ನೋಡಿಕೊಳ್ಳುವ ಬಯಕೆಯಂತೆ ನಿರ್ಮಿಸಿಕೊಂಡಿರುವ ಏರು-ತಗ್ಗುಗಳನ್ನ ಒಪ್ಪವಾಗಿ ನಿರ್ಮಿಸಿಕೊಂಡಿರುವಂತಿತ್ತು.
          
            ಹೀಗೆ... ಅವಳನ್ನು ನೋಡುತ್ತಿದ್ದಂತೆಯೇ......ನನ್ನ ನಾ ಮರೆತಿದ್ದೆ...... ನಾ ಅವಳಾಗಿದ್ದೆ... ನಾ ತಟ್ಟಿದ್ದೆ ನನ್ನಾ... ಮನದ ಕದವ. ಪುನಃ ತೆರೆದಿತ್ತು ಆ ಕದವು..... ಅಲ್ಲಿ ಈಗ ಆಗಿನ ಶೂನ್ಯವಿಲ್ಲ...... ಅವಳಿದ್ದಳು! ಸಕಲ ವರ್ಣಗಳ ಆತ್ಮವು ಶ್ವೇತಾ.... ನನ್ನ ಆತ್ಮವು ಅವಳು...... ಅವಳೇ!!!????


ಗುರುವಾರ, ಸೆಪ್ಟೆಂಬರ್ 15, 2011

ಕಳಚಿತೋ.... ನಾಯಾಕರ ವೇಷಗಳೂ....

           
                        "ಯೇನ್ ಕಿಟ್ಟಣ್ಣ! ಥೀಯೇಟ್ರನಾಗ ಒಂದು ಪಿಚ್ಛರ್ ರಿಲೀಸ್ ಆಗಂಗಿಲ್ಲ ಜೇಬು ಖಾಲಿ ಮಾಡ್ಕಂಡು ನೊಡಾಕ ವೋಗೋನು, ಇವತ್ತೇನ್ ಕೋರ್ಟ್ ಕಡೆ ಬಂದ್ಬೀಟೀದಿಯಲಾ...?" ಲಾಯೇರ್ ಸಾಹೇಬ, ತನ್ನ ವಕ್ರದೃಷ್ಟಿಯನ್ನ ತನ್ನ ಮನೆಗೆ ಕೆಲಸಕ್ಕೆ ಬರುವ ಅಂಬಮ್ಮನ ಪತಿರಾಯನಲ್ಲಿ ಬೀಳಿಸುತ್ತಾ, ಪ್ರಶ್ನೆಯನ್ನಾ ಎಸೆದೇ ಬಿಟ್ಟಾ.
"ಯೇನಿಲ್ಲಾ ಸಾಮಿ, ನಮ್ಮ ದರ್ಶನಣ್ಣೋರ ದರುಸನ ಪಡ್ಯೋಕೆ ಬಂದೇವ್ನಿ. ಅವ್ವರೇ ಅಲ್ಲವಾ ಸಾಮಿ ನಮ್ಮ ಪ್ರತ್ಯಕ್ಷ ದ್ಯಾವ್ರು, ಸ್ಫೂರ್ತಿ... ಯಲ್ಲಾ.... ಯಲ್ಲಾವಾ..!!"-ಕಿಟ್ಟಣ್ಣ
"ಆಹಾ!! ಹೊದಾ ಕಣ್ಲಾ..! ನಿಮ್ಮ ಆರಾಧ್ಯ ದಯ್ಯ!!! ಪೂಜೆ-ಗೀಜೆ, ಹ್ವಾಮ.... ಯೇನಾರಿ ಮಡ್ಕಂಡಿರೇನೋ??"- ಲಾಯೇರ್ ಸಾಹೇಬ.
"ನ್ಹೂ..ಮತೆ ಸಾಮೇರೇ.... ಅದ್ನ ಮಾಡದೇ ನಮ್ಮಣ್ಣೋರ ಹೆಂಗ ಬಿಡುಗಡೆ ಮಾಡ್ಸದು... ನೀವೆ ಹೇಳ್ಯಾರ? ನಮ್ಮ ಕಾಳಮ್ಮನ ಗುಡಿತಾವಿನ ಅರ್ಚಕರ ಮ್ಯಾಗ ಸ್ವಂತ ಅಮ್ಮನೇ ಬಂದು ಹೇಳ್ಯಾದ ಸಾಮಿ... ದರುಸನ ಹೆಂಡ್ತಿಮ್ಯಾಗ ಕಾಳಮ್ಮನ ಮೂನ್ನೂರ ಇಪ್ಪತ್ತನೇ ಜನುಮದಾಗ ಅವ್ಳಿಂದ ರಕ್ತಕಾರ್ಕಂಡು ಸತ್ತ, ರಕ್ಕಸನ ದೆವ್ವ ಮೆಟ್ಕಂಡೈತಂತೆ. ಅದ್ನ ವೋಡ್ಸಾಕ, ನಮ್ಮ-ನಮ್ಮ ಹೆಂಡಿರ್ನೆಲ್ಲಾ... ವೊದ್ದೆಬಟ್ಟೆಮ್ಯಾಲ ಉರ್ಳುಸೇವೆ, ಕೆಂಡದಮ್ಯಾಗ ಹೆಜ್ಜೆ, ಹತ್ತತ್ತು ಕುರಿ-ಕೊಳಿ ಕೊಡಾಕ ಹೇಳ್ಯಾದ." ಅಂದ ಕಿಟ್ಟಣ್ಣ ಭಯ-ಭಕ್ತಿ ತುಂಬಿದ ಧನಿಯಲ್ಲಿ.
"ಭಳೀರೇ ಕಿಟ್ಟಪ್ಪಾ!!ಹ್ಹೋ..ಹ್ಹೋ.. ಹ್ಹೋ..! ಭಾರೀ ಡಿಮ್ಯಾಂಡು ಕಣ್ಲಾ ಕಾಳಮ್ಮಂದು..! ವಿಜಯಲಕ್ಷ್ಮಿ ಮೇಲೆ ಮೆಟ್ಗಂಡಿರ ದಯ್ಯಾ ವೋಡ್ಸಾಕ ನಿನ್ ಹೆಂಡ್ತಿತಾವ ಕೆಂಡಸೇವೆ ಮಾಡಸ್ಬೀಕು ಅಂತಿದ್ದೀ ಅಂತಾಯ್ತು. ಮತ್ತೇ... ಬೆತ್ತಲೆ ಸೇವೇ.... ಏನಾರಿ ಐತನ್ಲನಾ???" ಮನೆಯಾಕಿನ ಜೊತೆ ಕಿಲ-ಕಿಲ ನಗುವಾಗ ಕುಲು-ಕುಲುಗೊಡುವ ತುಂಬಿದ  ಅಂಬಮ್ಮನ್ನ ಪೊಗದಸ್ತಾದ ಏರು-ತಗ್ಗುಗಳನ್ನ ನೆನಪಿಸಿಕೊಳ್ಳುತ್ತಾ, ಗಹಗಹಿಸಿ ನಗುತ್ತಾ.... ತನ್ನ ಜೊಲ್ಲಿನ್ನಿಂದ ಕಿಟ್ಟಣ್ಣನ್ನ ವೊರಟು ಮುಖವನ್ನ ತೋಯಿಸಿ, ಸಣ್ಣ ಧನಿಯಲ್ಲಿ, ಸ್ವಲ್ಪ ಭಾಗಿ ಕೇಳಿದ.... ದಿ ಗ್ರೇಟ್ ಲಾಯರ್ರಪ್ಪ!!
"ಯೇನ್ ಸಾಮಿ ತಮಾಷೆ ಮಾಡೇರ್ರೀ!! ತಪ್ಪು-ತಪ್ಪು!! ಈವಾಗ ಇದ್ನ ಮಾಡ್ಸಿ, ಪರಿಹಾರ ಕಂಡ್ಲಿಲ್ಲ ಅಂತಾದ್ರೆ, ಮುಂದಿನ ಬಾರಿ ಅದ್ನೇ ನೋಡಾನ ಅಂತ ಹೇಳ್ಯಾರ... ಪೂಜಾರ್ರಪ್ಪ!!" ಎನ್ನುತ್ತಾ ಲಾಯರ್ರಪ್ಪ ನುಡಿದ ಮಾತಿಗೆ ಕಾಳಮ್ಮ ಎಲ್ಲಿ ಮುನಿಸಿಕೊಂಡಾಳೋ ಎನ್ನುವ ಭಯದಿಂದಲೋ ಯೇನೋ.... ಐದು ಬಾರಿ ಪಟ-ಪಟನೇ ಕೆನ್ನೆಗೆ ಬಾರಿಸಿಕೊಳ್ಳುತ್ತಾ... ಅಲ್ಲೇ ಬಿದ್ದ ಜೊಲ್ಲನ್ನೂ ವೊರೆಸಿಕ್ಳುತ್ತಾ ಮತ್ತೆ ಹೇಳಿದಾ.... "ಹಂಗೇನಾರಿ ಇದ್ರೆ ನಿಮ್ಗೆ ತಿಳ್ಸದ್ದೇ ಬಿಡಕಾಗ್ತದಾ ಸಾಮೇರೆ?? ತಿಳ್ಸುಬುಡ್ತೀನಿ, ನಿಮ್ಮ ಬಳಗದವ್ರನ್ನ ಕರ್ಕಂಡು ಬಂದು ನಮ್ಮನೆ ಕಾಳಮ್ಮನ ದರುಸನ ಮಾಡ್ಯೋಗಿ ಸಾಮಿ...... ವಸೀ ಇವತ್ತಿನ ಕರ್ಚಿಗ್ಯಾನಾದ್ರೂ ಇದ್ರೆ.......!!" ಆ ಎಂಜಲುವರೆಸಿದ ಕೈಯಲ್ಲೇ... ತಲೆಕೆರೆದು ಕೊಳ್ಳುತ್ತಾ....ಹಲ್ಲು ಗಿಂಜಿದ, ಕೊಳೆತು ನಾರುತ್ತಿರುವ ತನ್ನ ಮನಸ್ಸಿನ ಪ್ರತೀಕದಂತಿರುವ ತನ್ನ ಕೊಳೆತ ಹತ್ತೂ ಹಲ್ಲುಗಳನ್ನ ತೋರಿಸುತ್ತಾ!!!!

********************************************************************************

                    "ಯೇನ್ಲಾ ತಿಪ್ಪಾ... ಹೆಂಗಯ್ತ್ಲಾ ಇವತ್ತಿನ ಕನೆಕ್ಷನ್ನು??" ಯಮನಿಗೆ ಸಡ್ಡು ಹೊಡೆಯುವಂತ ದೊಡ್ಡೊಟ್ಟೆಯ ಮೇಲೆ ಕೈ-ಯಾಡಿಸುತ್ತಾ..... ಬ್ಲಾಕ್-ಟಿಕೇಟ್ ಮಾರುವ ತಿಪ್ಪಾನ ಹತ್ತಿರ ಕೇಳಿದ ಪೋಲಿಸಣ್ಣಾ.
"ಅಣ್ಣೋ... ಯೇ..ನಿಲ್ಲಾಣ್ಣೋ.... ಬೆಳಗಿನ ಶೋ ದಿಂದ ರಾತ್ರಿ ಶೋ ವರೆಗೂ ಕಾದು ಕುತ್ಕಂಡೇನಿ, ವೊಬ್ನೆ ವೊಬ್ಬಾ ನುಶಿ ಆಸಾಮಿ ಈಕಡೆ ಹಾರಿ ಬಂದಿಲ್ಲಾ!!" ಬೇಸರದ ಧನಿಯಲ್ಲಿ ನುಡಿದ ತಿಪ್ಪಾ.
"ಯಾಕ್ಲಾ?? ಯೇನಾಯ್ತ್ಲಾ ಎಲ್ರಿಗೂ??"-ಪೋಲಿಸಣ್ಣ.
"ಯೇನಣ್ಣಾ ಹೇಳಾದು? ಥಿಯೇಟ್ರಿನ ಪರದೆ ಮ್ಯಾಗ ಬಣ್ಣ ಹಚ್ಕಂಡು ಕುಣಿಯೋ ನಾಯಕ್ರೆಲ್ಲಾ, ಕ್ಯಾಮರಾ-ಬಣ್ಣ ಎಲ್ಲಾ ಕಳಚ್ಕೋಂಡು ನಿಜ ಜೀವಂದಾಗ್ಲೇ ಕುಣೀಯಾಕ ಹತ್ಬೀಟಿದಾರ್ರ! ನೀವು ತೋರ್ಸೊ ಪಿಚ್ಚರ್ಗಿಂತ ನ್ಯೂಸ್ ಛಾನೆಲ್ಲವ್ರೇ... ರಿಯಲ್ಲಾಗಿ ತೋರಿಸ್ತಾರ್ರೆ! ಮತ್ಯಾಕೋ ನಿಮ್ಮ ಪುಟ್ಕೋಸಿ ಥಿಯೇಟರ್ರು!!? ಅಂತ ಮುಖಕ್ ಉಗ್ದು ಹೋಗ್ತಾರಣ್ಣೋ....!" -ತಿಪ್ಪಾ.
 "ಹೊದನ್ಲನಾ.... ಯೇನ್ ಗತಿ ಬಂದ್ಬಿಡ್ತೋ?? ಮಹಾ-ಮಹಾನ್ ನಾಯಕ್ರೆಲ್ಲಾ ಇಂಗಾಗ್ಬೀಟ್ರೆ ನಮ್ಮ ಗತಿಯೇನ್ಲಾ?" ಎನ್ನುತ್ತಾ ಕೈಯನ್ನ ಸೀದಾ ತಿಪ್ಪನ ಹರಕು ಜೇಬಿಗೆ ಹಾಕಿ, ಅಲ್ಲಿರುವ ನೂರರ ಮೂರು ನೋಟನ್ನ ಕಸಿದು ತನ್ನ ಜೇಬಿಗೆ ಹಾಕ್ಕೋಂಡ ದೇಸ ಕಾಯುವ ನಾಯಕ!
"ಅಣ್ಣೋ..!! ಮಗಿಗೆ ಹುಷಾರಿಲ್ಲಣ್ಣೋ...! ಮೆಡಿಸ್ಸಿನ್ನು ತಗೋಳ್ಳಾಕ ಮಡ್ಕಂಡಿದ್ದೆ........" ಕರುಳ ಬಳ್ಳಿಯ ನೋವನ್ನ ಮನಸ್ಸಿನಲ್ಲೇ ನೆನೆಸಿ ಕೊಳ್ಳುತ್ತಾ..... ಆರ್ದ ಧನಿಯಲ್ಲಿನುಡಿದ....ತಿಪ್ಪ.
"ಯೇನ್ಲಾ.... ಸುಳ್ಳು ಭೊಗಳ್ತೀಯಾ... ಬ್ಯಾವರ್ಸಿ! ಕತ್ಲಾಗ್ತಿದ್ದಂಗೆ ಬ್ಯಾರಣ್ಣನ ಬಾರ್ನಾಗ ಕಂಠಮಠ ಕುಡ್ಕಂಡು, ಬಿದ್ಕಂಡಿರ್ತೀಯಂತೆ...." ಅನ್ನತ್ತನ್ನುತ್ತಾ......  ಸರಕಾರದವ್ರು ಕೊಟ್ಟಾ ಬುಲೆಟ್ಟನ್ನಿನ ಮೇಲೆ ತನ್ನ ಧಢೋತಿ ಶರೀರವನ್ನ ಹೇರಿಕೊಂಡು.... ಟುರ್ರ್.... ಅಂತ ಛಾಲೂ ಮಾಡಿ... ಯಮನ ಪ್ರತಿರೂಪವಾಗಿ.... ಧಾವಿಸಿಯೇ ಬಿಟ್ಟ........!!!

********************************************************************************

              "ಟೈಟ್.... ಟೈಟು.... ಪುಲ್ಲು ಟೈಟು...." ಹಾಡೇಳುತ್ತಾ, ಝೂಂ.. ಅಂತ ಹಾರಿಬರುತ್ತಿರುವ ಸೊಳ್ಳೆರಾಯನನ್ನ, ತಿಗಣೆ ತನ್ನ ಬಡಕಲು ಶರೀರವನ್ನ ಅಲ್ಲಾಡಿಸುತ್ತಾ , ಹೊರಬರಲು ಒದ್ದಾಡಿಸುತ್ತಿರುವಾಗಿನ ಮಾತನ್ನು ಕಷ್ಟಪಟ್ಟು ಹೊರಹಾಕಿ ತಡೆದುನಿಲ್ಲಿಸುವಂತೆ ಮಾಡಿತು.
"ಅರ್ರೇ.. ತಿಗಣೆಯಣ್ಣಾ.... ಚೆನ್ನಾಗಿದಿಯಾ??"-ಸೊಳ್ಳೆರಾಯ.
"ಯೇನ್ ಚೆನ್ನಾಗಿರೋದೋ ಯೇನೋಪ್ಪಾ ರಾಯ! ಊಟ-ಉಪಚಾರ ಇಲ್ದೇ ನಾಕು ದಿನ ಕಳ್ದೋಯ್ತು ನೋಡಪ್ಪಾ!!"- ತಿಗಣೆಯ ಧನಿ ಹೊಟ್ಟೆವಸಿವನ್ನ ಎತ್ತಿ ತೋರಿಸುತಿತ್ತು.
"ಯಾಕಣ್ಣ... ಯೇನಾಯ್ತು??" ತನ್ನ ಕೀಳುಧನಿಯನ್ನ ಮತ್ತೂ ಕೀಳಾಗಿಸಿ ಕೇಳಿತು.... ರಾಯ....
"ಯೇನಂತಾ ಹೇಳ್ಳಪ್ಪಾ!! ನಿಂಗೇ ಗೊತ್ತಿರ್ಬೇಕಲ್ಲಾ ಥಿಯೇಟರ್ರ್ ಖಾಲಿಯಾದದ್ದು!! ಅದಿರ್ಲಿ, ನೀ ಯೇನ್ ಭಲು ಖುಷಿಯಿಂದ ಹಾಡೇಳ್ತಾ ಬರ್ತೀದಿಯಲ್ಲಾ.... ಯೇನ್ ರಾಯ ವಿಶೇಷ... ಯೆಲ್ಲೋ.. ಮದುವೆ ಊಟ ಮಾಡ್ಕಂಡೇ ಬಂದಿದ್ದಿ ಅಂತಾಯ್ತು??" ಆಸೆಯ ಗಣ್ಣೀನಲ್ಲಿ ನುಡಿಯಿತು ತಿಗಣೆಯಣ್ಣ.
"ವೋಗಣ್ಣೋ...! ಮದುವೇನಾ?? ಅಲ್ಲಿಗಿಂತನೂ ಪೊಗದಸ್ತು ಊಟ ಮಾಡಿ ಬರ್ತೀದಿನಿ ಅಣ್ಣಾ..!!" ಕಣ್ಣು ಮಿಟುಕಿಸುತ್ತಾ ನುಡಿಯಿತು ರಾಯ.
"ಯೇನೋಪ್ಪಾ!! ನಿಮಗೇನು? ದೇವ್ರು ಚಿನ್ನದಂತ ರೆಕ್ಕೆ ಕೊಟ್ಟಿದಾನೆ. ಮಲ್ಟಿ ಪ್ಲಸ್ಸು,ಪೆಕ್ಸ್, ಮಾಲ್ಲು ಗಳಲ್ಲೇ ಹಾರಾಡ್ತಾ ಇರ್ತೀರ್ರಾ. ನಮ್ದು ನೋಡು ಇದೇ ಲೋಕಲ್ಲು ಸಾರಾಯಿ ತುಂಬಿರೋ ರಕ್ತವೇ! ನಾಕುದಿನದಿಂದ ಅದೂ ಗತಿ ಇಲ್ಲ.. ನೋಡು!!" ಅಳಿದುಳಿದ ಉಸಿರೆನ್ನಲ್ಲ ಬಿಡುವೆನೋ ಎಂಬಂತೆ ನುಡಿಯಿತು ತಿಗಣೇಯಣ್ಣ..
ವೋಗಣ್ಣೋ.. ಯೇನ್ ಮಾಲ್ಲು ಇಲ್ಲಾ, ಸುಡುಗಾಡು ಇಲ್ಲಾ.... ಜೈಲ್ ನಿಂದ ಬರ್ತಿದೀನಿ ಅಷ್ಟೇ! ಹಾಕಿದಾರೆಲ್ಲಾ ಮಹಾನಾಯಕರನ್ನೆಲ್ಲಾ ಜೈಲಿನಲ್ಲಿ, ಅವ್ರ ಬಣ್ಣವನ್ನ ಕಳಚಿ. ಯೇನ್ ಪೊಗದಸ್ತು ಊಟ ಅಂತಿ, ಆಹಾ..! ಯೆಲ್ಲಾ ವಿದೇಶಿ ಕೊಳೆತ ದ್ರಾಕ್ಷಿಯ ಪ್ರಭಾವ!!" ಉದ್ದ ಸುಂಡಿಯ ನಾಲಿಗೆಯನ್ನ ಚಪ್ಪರಿಸುತ್ತಾ.... ಮತ್ತೆ ನುಡಿಯಿತು...."ಅಲ್ಲಿ ಇನ್ನೂ ಜನ್ರನ್ನ ತಗಂಡ್ಬಂದು ಹಾಕ್ತಾರಂತೆ. ನಮ್ಮ ಬಳಗಕ್ಕೆ ಸುದ್ದಿ ಮುಟ್ಸೋಕೆ ಹೊರ್ಟಿದೀನಿ." ಗುಂಯ್ ಗುಟ್ಟಿತು ಸೊಳ್ಳೆರಾಯ.
"ಮ್ಹೂ.... ನಿಮ್ಮದೇ ಭಾಗ್ಯ. ನಮ್ಮ ಋಣತೀರ್ತು ಅಂತಾಯ್ತು ಹಾಗಿದ್ರೆ ಈ ಭೂಮಿಮೇಲೆ" ಅನ್ನುತ್ತತ್ತನ್ನುತ್ತಲೇ... ಕಣ್ಣಿರು ಕೂಡ ಧಾರೆಯಾಗಿ ಉದುರತೊಡಗಿತು.
"ಹಯ್ಯೋ...!! ಯೇನ್ ಮಾತು ಅಂತ ಆಡ್ತೀಯಣ್ಣೋ?? ತಪ್ಪಾಯ್ತು ಅಂತದ್ಕೋ!! ನಾವು ಮನುಷ್ಯರ ರಕ್ತ ಕುಡೀಯೋರು ಅಂತ ಅವ್ರ ಬುದ್ಧಿನೇ ಬೇಳೆಸ್ಕೋಳೋಕೆ ಬರುತ್ತಾ? ರಕ್ತ ಅವ್ರದ್ಧಿರ್ಬಹುದು. ಆದರೆ ಬುದ್ಧಿ ನಮದೇ ಕಣಣ್ಣೋ... ನಿಮ್ಮ ಬಳಗನ್ನೂ ಕರ್ರೀ ಅಂತೀನಿ. ನಮ್ಜೋತೆ ನಿಮ್ಮನ್ನೂ ಹಾರಸ್ಕಂಡು ಹೊಂಡ್ತೀವಿ. ಇರದನ್ನಾ ಎಲ್ರೂ ಹಂಚ್ಕಂಡು ತಿನ್ನಾನ, ನಾವು ಬದ್ಕೋಣ, ನಮ್ಮವ್ರನ್ನೂ ಬದುಕಿಸೋಣ" ಅನ್ನುತ್ತಾ ಪುಢಾರಿಯ ವಿದೇಶಿ ಮಧ್ಯದ ಪ್ರಭಾವದ ಆಶ್ವಾಸನೆಯನ್ನ ನೀಡಿ..... ಹಾಡಿನ ಮುಂದಿನ ಸಾಲನ್ನ ನೆನಪಿಸಿಕೊಳ್ಳುತ್ತಾ ಗುಂಯ್ಯನೇ... ರೆಕ್ಕೆಯನ್ನ ಬಡಿಯತೊಡಗಿತು ಸೊಳ್ಳೆರಾಯ......" ಯಾವ ಬ್ರ್ಯೋಂಡೋ...... ಇಷ್ಟೋಂದು ಘಾಟೋ....!!!!"

ಕಣ್ಣೀರಿಡುತಿಹೆನು.... ಗೆಳತಿ....








ನಾನಿಲ್ಲಿಹೆನು ಗೆಳತಿ....
ನೀನ್ನಾ ನಗುಮುಖವ ನೋಡುತ್ತಾ..!
ನಾ ಕಣ್ಣೀರಿಡುತಿಹೆನು..
ನೀ ಬರೇ ನಗುಮುಖದ ಗೊಂಬೆಯಾಗಿಹೆಯೆಂದು!

ಕುಳಿತಲ್ಲಿಂದ ಅಲ್ಲಾಡುತ್ತಿಲ್ಲ ನಾ... ಗೆಳತಿ..
ಚಿತ್ತ-ಚಿತ್ರ ಪಟದಿಂದ ಅಳಿಸಿಹೋಗುವೆಯೆಂಬ ಭಯದಿಂದ!
ನಾ ಕಣ್ಣೀರಿಡುತಿಹೆನು...
ನೀ ಯಾವಾಗಲೂ... ನಗುತಿರಲೆಂದು!!

ನಾ ಅರಿತಿಹೆನು.... ಗೆಳತಿ...
ನಿನ್ನಾ ನಗುಮುಖದ ಹಿಂದಿನಾ ಮರ್ಮ ವನ್ನಾ...
ನಾ...ಕೇವಲಾ ಬೊಂಬೆಯಾಗಿಹೆನೆಂಬ ನೋವನ್ನಾ...!
ನಾ ಕಣ್ಣೀರಿಡುತಿಹೆನು...
ಮುನ್ನಾಂದಿನ.. ಆ ನೀರನ್ನೇ... ಸ್ವಾತಿಯ ಮುತ್ತನ್ನಾಗಿಸಿ...ಹಾರವಾಧರಿಸಿ
ಮತ್ತೂ ನಗಿಸುವ ಮಹದಾಸೆಯಿಂದ.......... :’( :’( :’( 



                                                                -ಪ್ರೀತಿಯ.... ಗಣೇಶಣ್ಣನಿಗರ್ಪಿತ......!!!!!

ಶನಿವಾರ, ಸೆಪ್ಟೆಂಬರ್ 10, 2011

ಮಾಯಾಂಗನೆ- ೨, ನೆನಪಿನ ಗಂಟಿನ ಬುತ್ತಿಯ ಬಿಚ್ಚುತ್ತಾ.........

              ನಡೆದಾಡುತ್ತಿರುವ, ಓಡುತ್ತಿರುವ ಉಳಿದವರನ್ನು ಭಾವ ತುಂಬಿದ ಕಣ್ಣುಗಳಿಂದ ನೋಡುತ್ತಾ, ತುಮುಲತೆಯಿಂದ ಕೂಡಿದ ಮನಸ್ಸಿನಿಂದ "ತಾನ್ಯಾವಾಗ ಆ ರೀತಿ ವಿಹರಿಸ ಬಲ್ಲೆ??" ಎನ್ನುವ ಪ್ರಶ್ನೆಯನ್ನ ತನ್ನಲ್ಲೇ ಕೇಳಿಕೊಳ್ಳುತ್ತಾ, ನಿಧಾನವಾಗಿ ಅಂಬೆಗಾಲಿಕ್ಕುತ್ತಾ.... ಆಸರೆಯನ್ನ ಹಿಡಿದು ಕಷ್ಟಪಟ್ಟು ಎದ್ದುನಿಂತು ಮೊದಲನೆಯ ಹೆಜ್ಜೆಯನ್ನ  ಇಟ್ಟು, ನಾಲ್ಕು ಹೆಜ್ಜೆಯನ್ನ.... ಹಾಕಿ, ಸುತ್ತಲೂ ಒಮ್ಮೆ ಭಯದಿಂದ ಕಣ್ಣನ್ನಾಡಿಸಿತು ಮಗು....!! ತಾನು ಹಿಡಿದುಕೊಂಡು ನಿಂತ ಆಸರೆ ದೂರ ನಿಂತಿದೆ...! ಕೈ ಆಡಿಸಿದರೆ ಏನೂ ಸಿಗಲೊಲ್ಲದು...!! ಗಾಭರಿಯುಂಟಾಗಿ ಅಳು ತನ್ನ ಜಾಗವನ್ನ ಖಾಯಂ ಆಗಿ ಆಕ್ರಮಿಸಲು  ಹವಣಿಸುತ್ತಿರುವಂತೆ...... ಕರತಾಡನದ ಜೊತೆಗೆ, ಹುರಿದುಂಭಿಸುವ ನಗು ಸುತ್ತಲಿನಿಂದ ಮಗುವಿನ ಕಿವಿಗಪ್ಪಳಿಸತೊಡಗಿತು..! ಕೇಕೆಯ... ನಗುವನ್ನ ತನ್ನಮುದ್ದು ಮುಖದಲ್ಲಿ ತಂದುಕೊಂಡು...... ತನ್ನನ್ನು ಬಾಚಿ ತಬ್ಬಿಕೊಳ್ಳಲು, ಕೈ ಮುಂದು ಮಾಡಿಕೊಂಡಿರುವ ಅಮ್ಮನ ಮಡಿಲನ್ನ ಸೇರುವ ಉತ್ಸಾಹದಿಂದ ತನ್ನ ಮತ್ತೊಂದು ಹೆಜ್ಜೆಯನ್ನ ಇಟ್ಟಿಯೇ ಬಿಟ್ಟಿತು.....! "ತಾನೂ ಓಡಾಡ ಬಲ್ಲೆ, ಓಡ ಬಲ್ಲೆ... ಇನ್ನು ಮುಂದೆ ಜಿಗಿದು, ಕುಪ್ಪಳಿಸಲೂ ಬಲ್ಲೆ..." ಎನ್ನುವ ಭಾವ ಅದರ ಮನದ ತುಂಬಾ ತುಳುಕಾಡುತಿತ್ತು........

ಬಸ್ಸು, ಗಮ್ಯ, ನಾನು, ಸೀಟು, ಮಾಯಾಂಗನೆ........................
                 ಎಲ್ಲಾ ಬಸ್ಸುಗಳನ್ನೂ ಹೆಚ್ಚು-ಕಮ್ಮಿ ಒಂದೇ ಮೆಟಲ್ ನಿಂದ ತಯಾರಿಸಿರ ಬಹುದು. ಆದರೆ ಪ್ರತಿ ಬಸ್ಸಿಗಿರುವ ಬೋರ್ಡುಗಳು ಇರುವುದು ಬೇರೆ-ಬೇರೆನೇ! ಸೇರುವ "ಗಮ್ಯ"ವೂ ಕೂಡ ಬೋರ್ಡಿಗೆ ತಕ್ಕಂತೆ.
               ಮನುಷ್ಯನಂತೆ!!! ಎಲ್ಲರೂ ಪಂಚಭೂತಗಳಿಂದಲೇ ನಿರ್ಮಿಸಲ್ಪಟ್ಟವರೇ...! ಆದರೆ ಆಕಾರ, ವಿಕಾರ, ವಿಹಾರ, ಮನೋವ್ಯಾಪಾರ.... ಎಲ್ಲವೂ ಬೇರೆ ಬೇರೆಯಾದಂತೇ! ಅವರ ಹಣೇಬರಹಕ್ಕೆ ತಕ್ಕಂತೆ! ಅದು ನಮ್ಮವುಗಳ ಕರ್ಮವಂತೆ!! ಹಾಗಿದ್ದರೆ ಹಣೆಬರಹ-ಬೋರ್ಡು ಎರಡೂ ಒಂದೇ ಇದ್ದಂತೆ ಆಯಿತಲ್ಲವೇ?? ಇಷ್ಟವೋ-ಕಷ್ಟವೋ...... ಬೋರ್ಡಿನಲ್ಲಿದ್ದ (ಹಣೆಬರಹದ) ಕಡೆ ಸಾಗಲೇ ಬೇಕಂತಾಯಿತು!! ಹಾಗೇ ಬೋರ್ಡನ್ನು ಹಾಕಿಕೊಂಡು, ಬೋರ್ಡಿನಲ್ಲಿರುವ ಗಮ್ಯದತ್ತ ಸಾಗುತ್ತಿರುವ ಬಸ್ಸು... ಬಸ್ಸಿನಲ್ಲಿ "ನಾನು......."

                    ನಾನು..... ಅದೇ ನಾನು.. "ಪ್ರಥಮ ಚುಂಬನಂ ದಂತ ಭಗ್ನಂ" ಎನ್ನುವಂತೆ ಮೊದಲು ನಡೆದ, ಆವತ್ತಿನ ಮಾಯಾಂಗನೆಯ ಪ್ರಹಸನ ನನ್ನನ್ನ ತೀರಾ ಅವಮಾನಕ್ಕೀಡು ಮಾಡಿದ್ದರಿಂದ, ನನ್ನ ಮನಸ್ಸಿನ ಕೆಲವೊಂದು ವ್ಯಾಪಾರಗಳಿಗೆ ಕಡಿವಾಣ ಹಾಕಲೇ ಬೇಕಿತ್ತು!! ಅದು ಅನಿವಾರ್ಯವೂ ಹೌದಾಗಿತ್ತು!! ಆದರೆ ಯೇನಂದುಕೊಂಡರೆ ಯೇನು ಬಂತು??? ಪರಿಸರ ನಮ್ಮನ್ನ ಬಿಡಬೇಕಲ್ಲ!! ನಾನು ಕುಳಿತ ಬಸ್ಸಿನ ಪರಿಸರವೇ ಅದಾಗಿತ್ತು!! ಅದ್ಯಾಕೆ ಅಂತ ಕೇಳ್ತಿದೀರಾ??? ನಾನು ಕುಳಿತಿದ್ದು "ಮಾಯಾಂಗನೆ"ಯರಿಗಾಗಿಯೇ ಮೀಸಲಿಟ್ಟ "ಸೀಟು"ಗಳಲ್ಲಿ!!!!

                 ನಾನು ಹತ್ತಿದ ಸಂದರ್ಭವೇ ಹಾಗಿತ್ತು. ಹಿಂದಿನ ಸೀಟುಗಳೆಲ್ಲಾ ತುಂಬಿಕೊಂಡಿದ್ದವು. ಆದರೆ, ಮುಂದೆ ಇರುವ "ಸ್ತ್ರೀಯರಿಗಾಗಿ" ಎಂದು ಶಿರೋನಾಮವುಳ್ಳ ಸೀಟುಗಳು...ಮಾತ್ರಾ ತನ್ನ ಸೆರಗನ್ನ ಹಾಸಿ ನನ್ನ ಕುಳಿತುಕೊಳ್ಳಲು ಪ್ರೇರೆಪಿಸುವಂತೆ ಖಾಲಿಯಾಗಿದ್ದವು!! "ಹುಚ್ಚರ ಮದುವೇಲಿ ಉಂಡೋನೆ ಜಾಣ" ಎನ್ನುವಂತೆ ಹಾಗೆ ಕರೆದು ಆಹ್ವಾನಿಸುತ್ತಿರುವ ಅವುಗಳ ಪ್ರೀತಿಯ ಕರೆಗೆ ಓ... ಗುಟ್ಟಿ, ಹೋಗಿ ಆಸೀನನಾಗಿಯೇ ಬಿಟ್ಟೆ!
               ಆ ಸಮಯದಲ್ಲಿಯೇ, ಈ ಸೀಟಿನಲ್ಲಿ ಕುಳಿತುಕೊಳ್ಳಲು ಖಂಡಿತಾ ಗಂಡೆದೆ ಬೇಕೆ-ಬೇಕು ಎಂದು ಅನ್ನಿಸಿದ್ದು ನಿಜವೇ!! ಯಾಕೆಂದರೆ "ಇಲ್ಯಾಕ್ರಿ ಕುತ್ಗೋಂಡಿದೀರಾ??? ಹಿಂದೋಗಿ ನಿಂತ್ಗೋಳ್ರೀ" ಎಂದು ಎಬ್ಬಿಸಿ ಓಡಿಸುವ ಕಂಡಕ್ಟರ್, "ಹಯ್ಯೋ... ಖಾಲಿಯಾದ ಸೀಟು, ನಮಗೆ ಕುಳಿತುಕೊಳ್ಳಲಿಲ್ಲವಲ್ಲ" ಎಂದು  ಬಸ್ಸಿನ ಕಂಬಿಗೆ ಜೋತು ಬೀಳುವ ಶರೀರಕ್ಕೆ, ಸವಾಲೆಸೆಯುವಂತೆ ತಾನೇನು ಕಮ್ಮಿ ಇಲ್ಲ ಎಂದು, ಧೈರ್ಯವಿಲ್ಲದೇ ಅಲ್ಲಿ ಕುಳಿತುಕೊಂಡಿರುವವರನ್ನ ನೋಡಿ ಜೋಲು.... ಹಾಕುವ ಸಹಪ್ರಯಾಣಿಕರ ಮುಖಭಾವಗಳೂ,  ಲೇಡಿಸ್ ಮಣಿಗಳು ಬಂದಾಗ, ಅಲ್ಲೇ ಪಕ್ಕದಲ್ಲಿ ನಿಂತ ಸ್ವಜಾತಿಯವರು "ಇವ್ನೇನು..! ದೊಡ್ಡದಾಗಿ  ಇಲ್ಲಿ ಕುತ್ಗೋಂಡಿದಾನೆ" ಎಂದು ಅಸೂಯೆಯೋ ಅಥವಾ    ಅವರ ಎದುರಿಗೆ ಫೋಸು ಕೊಡಲೋ.... ಕುಳಿತವರನ್ನ ಎಬ್ಬಿಸಲು ನಡೆಯುವ ಪೈಪೋಟಿಗಳಿಂದ ನಡೆಯುವ ಅವಾಂತರಗಳೂ, "ಹೆ ಹೆ ಹೆ! ಅವನನ್ನ ನೋಡು, ಲೇಡಿಸ್... ಸೀಟಿನಲ್ಲಿ ಹೋಗಿ ಕೂತಿದ್ದಾನೆ!! ಹೆಂಗಸ್ರಂತವ್ನು" ಎಂದು ಕಿವಿಗಪ್ಪಳಿಸುವ ಪೋಲಿ ಮಾತುಗಳೂ, ಈ ಸೀಟಿನಲ್ಲಿ ಕುಳಿತಿದ್ದರಿಂದ, ಇವನು ಸ್ತ್ರೀ ವಿರೋಧೀ ಚಟುವಟಿಕೆಯಲ್ಲಿ ತೊಡಗಿಕೊಂಡಿರಬೇಕು.. ಎಂಬ ಗುಮಾನಿ... ನಮ್ಮ ಮಾಯಾಂಗನೆಯರ ಮನದಲ್ಲೂ ಕೆಲವೊಮ್ಮೆ ಮೂಢಿಬಂದು....ನಡೆಯುವ ಆಮೇಲಿನ ಚಳುವಳಿ..  ಇತ್ಯಾದಿ ಇತ್ಯಾದಿ......... ನನಗೆ ಗೊತ್ತಿಲ್ಲದ್ದೇನಲ್ಲ!! ಬಂದದ್ದು ಬರಲಿ... ಎಂದು ಗಟ್ಟಿ ಮನಸ್ಸು ಮಾಡಿ ಕುಳಿತೇ ಕೊಂಡಿದ್ದೆ!!
                  ನಾನು ಯೋಚಿಸಿದಂತೆ ಸದ್ಯದಲ್ಲಿ ಏನೂ ನಡೆದಿರಲಿಲ್ಲ. ಯಾರೂ ನನ್ನ ಕಡೆ ಅಷ್ಟು ಲಕ್ಷ್ಯವಹಿಸಿದಂತೆ ಕಂಡುಬರಲಿಲ್ಲ! ಆ ಸಂದರ್ಭದಲ್ಲಿಯೇ, ಒಬ್ಬ ತಾತ... ತನ್ನ ಒಂದು ಕಾಲನ್ನ ಎಳೆಯುತ್ತಾ... ಹಿಂದೆ-ಮುಂದೆ ನೋಡುತ್ತಾ... ಸೀದಾ ಬಂದು ನನ್ನ ಪಕ್ಕದಲ್ಲಿಯೇ ಬಂದು ಕುಳಿತುಕೊಂಡ. ಒಮ್ಮೆ ನನ್ನ ನೋಡಿ ನಸುನಕ್ಕ ಕೂಡ!! ಆ ಅಪರಿಚಿತ ಮುಖದ ನಗುವಿನ ಹಿಂದೆ ಯಾವ ಭಾವ ಅಡಗಿತ್ತೋ...?? ನಾನರಿಯೇ! ಲೇಡಿಸ್ ಸೀಟುಗಳಲ್ಲಿ ಕೆಲವೇ-ಕೆಲವು ಮಾತ್ರಾ "ಸೀಟು"ಗಳು ಆಸೀನವಾಗಿದ್ದವು.....!! ಬಸ್ಸು ಹೊರಟಿತು, ಪ್ರತಿ ಸ್ಟಾಪಿನಲ್ಲೂ ಇಳಿಸಿಕೊಳ್ಳುತ್ತಾ, ಹೇರಿಸಿಕೊಳ್ಳುತ್ತಾ ಸಾಗುತಿತ್ತು. ಖಾಲಿಇರುವ ಸೀಟುಗಳು ತುಂಬುತ್ತಾಬಂದು, ಕೆಲವು ಅಂಗನೆಯರು ಬಂದು ನಿಂತುಕೊಂಡರು. ಆದರೂ ನಾವುಗಳು ಕುಳಿತೇ ಇದ್ದೆವು. ನಮ್ಮಲ್ಲಿ ಬಂದು ಸೀಟು ಬಿಟ್ಕೊಡಿ ಎಂದು ಯಾರೂ ಕೇಳಿರಲಿಲ್ಲ!! ಕೇಳಿದರೂ ನನ್ನ ಪಕ್ಕ ಕುಳಿತ ತಾತನದು ಸುಮಾರು ಒಂಟಿಕಾಲೇ ಆದ್ದರಿಂದ, ಅವನನ್ನ ಎಬ್ಬಿಸುವ ಧೈರ್ಯಯಾರೂ ಮಾಡುವುದಿಲ್ಲ ಅಂದುಕೊಂಡಿದ್ದೆ. ಅವನನ್ನ ಎಬ್ಬಿಸಿದರೆ ತಾನೆ ನಾನು ಏಳಲಿಕ್ಕೆ ಅವಕಾಶವಾಗುವುದು!! ನಮ್ಮನ್ನ ನೋಡಿ ಆಚೆತಿರುಗಿಸಿಕೊಂಡ ಕಣ್ಣುಗಳನ್ನೂ, ಎದ್ದೇಳಿ ಎಂದು ಧೈರ್ಯವಿಲ್ಲದ ಕಣ್ಣುಗಳನ್ನೂ ನಾನು ಗಮನಿಸುತ್ತಲೇ ಇದ್ದೇ. ಆ ಸಮಯದಲ್ಲೇ.... ಎರಡು ಸೀರೆಗಳನ್ನುಟ್ಟುಕೊಂಡಗೊಂಬೆಗಳು ಬಸ್ಸನ್ನ ಹತ್ತಿರುವುದು ನನ್ನ ಗಮನಕ್ಕೆ ಬರುತ್ತಿದ್ದಂತೆ, ತಾತನಲ್ಲಿ ಏನೋ ಹೇಳುತ್ತಿರುವುದೂ, ಆತನು ಏಳುತ್ತಿರುವುದೂ ಕೂಡ ನನಗೆ ಕಂಡುಬಂತು. ಇನ್ನೇನು... ನಾನು ಎದ್ದು ಸೀಟು ಬಿಟ್ಟು ಕೊಟ್ಟೆ. ಆದರೆ ಅವರಲ್ಲಿ ಒಬ್ಬಳು ಮಾತ್ರಾ, ನಾನು ಕುಳಿತಕಡೆ ಕುಳಿತಳು, ಪಕ್ಕದಲ್ಲಿ ಮತ್ತೆ ತಾತನೇ ಆಸೀನನಾದ. ಮತ್ತೊಬ್ಬಳು ಮುಂದೇನೇ ಅಡ್ಜೆಸ್ಟ್ ಆದಳು. ನಾನು ನಿಂತುಕೊಂಡೇ ಇದ್ದೆ!!  ಆ ಸಮಯದಲ್ಲಿಯೇ, ನಾನು ನಿಂತ ಪಕ್ಕದಲ್ಲಿಯೇ ಮತ್ತೊಂದು ಸೀಟು ಖಾಲಿಯಾದದ್ದ ನೋಡಿ ಮತ್ತೆ ಆಸೀನನಾದೆ. ಮತ್ತೇ ಅದೇ ಸಮಯದಲ್ಲಿ ವೃದ್ಧೆಯೊಬ್ಬಳು ಏರಿರುವುದನ್ನ ನೋಡಿ, ನನ್ನ ಕರ್ತವ್ಯಪಾಲಿಸಲೇ ಬೇಕಾಯಿತು!! ಮತ್ತೆ ಜೋಲುವ ಜೋಕಾಲಿ ನಾನಾದೆ. ಆದರೆ ಯಾವ ಜನುಮದ ಸುಕೃತದ ಫಲವೋ!! ನನ್ನ ಸೀಟಿನಲ್ಲಿ ಆಸೀನಳಾಗಿದ್ದ ಗೊಂಬೆ ಎದ್ದು ಇಳಿದು ಬಿಟ್ಟರೆ, ತಾತ ನನ್ನ ಸೀಟಿನತ್ತ ಜರುಗಿ ಕುಳಿತು, ನನಗೆ ಮತ್ತೆ ಕುಳಿತುಕೊಳ್ಳಲು ಅವಕಾಶಮಾಡಿಕೊಟ್ಟ. ಮತ್ತೆ ನಾನು ಸೀಟಿಗೆ ಮರಳಿದೆ. ಅದರ ಜೊತೆಗೆ ಅದೃಷ್ಟ ದೇವತೆ ನನ್ನ ಕಡೆಗೇ ಸಂಪೂರ್ಣವಾಗಿ ವೊಲಿದುಬಿಟ್ಟಳೂ ಕೂಡ!! ಹೇಗೆ ಅಂತೀರೋ?? ನಮ್ಮ ತಾತನ.. ಒಂದು ಕಾಲು ಬಗ್ಗಿಸಿಕೊಳ್ಳಲು ಆಗುತ್ತಿರಲಿಲ್ಲ, ಆ ಕಾಲನ್ನ ಅವನು ನೇರವಾಗಿಯೇ ಇಟ್ಟುಕೊಂಡಿದ್ದರಿಂದ ಸಂಪೂರ್ಣ ಸೀಟಿನ ಶೇಕಡಾ 70 ಭಾಗ ಅವನೇ ಆವರಿಸಿ ಕೊಂಡಿದ್ದ!.  ಅವನ ಪಕ್ಕ ನಾ ಕುಳಿತಿದ್ದೆ, ಆಮೇಲೆ ಏಷ್ಟೋ ಸ್ತ್ರೀಮಣಿಗಳು ಬಸ್ಸು ಏರಿದರು, ಆ ಸೀಟಿನಲ್ಲಿ ಮಾತ್ರಾ ಕುಳಿತುಕೊಳ್ಳಲು ಮನಸ್ಸು ಮಾಡಲಿಲ್ಲ, ಮಾಡಿದರೂ ನಮ್ಮ ತಾತನ.... ತೊಡೆಯ ಮೇಲೆ ಆಸೀನರಾಗಬೇಕಾಗಿತ್ತಷ್ಟೇ!!!!  ಉಳಿದ 30 ನನಗೆ ಬೇಕಷ್ಟಾಗಿತ್ತು! ಈ ರೀತಿಯಾಗಿ... ಸೀಟಿನ ಉದ್ದದ ಪ್ರಹಸನ ನಿಮಗೆ ಬೇಜಾರು ತರಿಸುತ್ತಾ ನಡೆಯುತ್ತಿದ್ದರೆ, ನಾನು ಮಾತ್ರಾ ಅಲ್ಲಿರಲೇ ಇಲ್ಲಾ.... ! ನನ್ನ ನಾ ಕಳೆದುಕೊಂಡು, ಸುಂದರ ಲೋಕದಲ್ಲಿ ವಿಹರಿಸುತಿದ್ದೆ. ಹಾಗೆ ಸ್ವಚ್ಛಂದವಾಗಿ ವಿಹರಿಸುವಂತೆ ಮಾಡಿದ್ದೇ... ನನ್ನ ಮುಂದೆ ಕುಳಿತ "ಮಾಯಾಂಗನೆ"!!  ಹಯ್ಯೋ... ಎದ್ದು ಹೋಗ್ಬೇಡಿ... ಊಟಕ್ಕೆ ಬಂದೋರು, ತಾಳಿ ಕಟ್ಟಿದ ತಕ್ಷಣ ಎದ್ದು ನಡೆದರೆ ಹೇಗೆ??? ಊಟವನ್ನೂ ಮುಗುಸಿಹೋಗಿ..... ಅಲ್ಲವೇ? ಹೆ ಹೆ ಹೆ............... ಜೊತೆಗೆ ಉಡುಗೊರೆ ಕೊಟ್ಟರೆ.... ನೆನಪಿನ ಕಾಣಿಕೆ (ಕಮೆಂಟ್).... ಎಂದಿಗೂ ಮರೆಯೋಲ್ಲಾ....!  

     
                            
                ರವಿ ಉದಯಿಸುತ್ತಿರುವಾಗ ಸೂರ್ಯಕಾಂತಿಗಳು, ತಾವರೆಗಳು ನಗಲು ಪ್ರಾರಂಭಿಸದರೆ, ಒಂದು ಪಾಳುಬೀಳತೊಡಗುತ್ತದಂತೆ!! ಅದ್ಯಾರು ಅಂತನಾ?? ಇಬ್ಬನಿಯಿಂದ ತೋಯ್ದು, ಅದನ್ನೇ ಮುತ್ತಿನಂತೆ ಜೋಡಿಸಿಕೊಂಡು ಸೌಂದರ್ಯವೇ ತಾನೆಂದು ನಲಿದು, ರವಿಯು ಮೇಲೇರುತಿದ್ದಂತೆ ತನ್ನೆಲ್ಲಾ ಅಂದವನ್ನೂ ಕರಗಿಸಿಕೊಂಡು ಪಾಳು ಬೀಳುವ ಜೇಡದ ಬಲೆ!!! ಅಂತಹ ಅದರಿಂದ ಕರಗಲ್ಪಟ್ಟ ಹನಿಗಳು.... ಸೀದಾ ನನ್ನ ಹೃದಯವನ್ನ ಪ್ರವೇಶಿಸಿದಾಗ ಉಂಟಾಗುವ ಆನಂದ ಕೊಡುವ ಸೌಂದರ್ಯ ರಾಶಿಯೇ..... ನನ್ನೆದುರಿನ ಸೀಟಿನಲ್ಲಿ ಕುಳಿತುಕೊಂಡಿದ್ದಳು!! ಇವಳ ಎದುರಿಗೆ ಆ ಕಲ್ಪನೆಯ ಮಾಯಾಂಗನೆಯೂ ಏನೂ ಅಲ್ಲ ಅಂತ ತೋರುತಿತ್ತು ನನಗೆ. ಛೇ...!! ಇಷ್ಟುದಿನ ನಿದ್ದೆಗಣ್ಣಿನಲ್ಲಿ... ಅಂಗನೆಯರನ್ನು ಕಂಡು ಭ್ರಮಾಲೋಕದಲ್ಲಿ ವಿಹರಿಸುತಿದ್ದೆ. ಆದರೆ ಈ ದಿನ, ವಾಸ್ತವವಾಗಿ ನನ್ನೆದುರಿಗೇ ಬಂದು ಕುಳಿತಿದ್ದಳು. ಯಾವ ಯಾವ ಜಾಗದಲ್ಲಿ ಯಾವ್ದ್ಯಾದ್ಯಾವ್ದು, ಎಷ್ಟೆಷ್ಟು ಇರ್ಬೇಕಿತ್ತೋ..... ಕಿಂಚಿತ್ತೂ ಕಮ್ಮಿಯಿಲ್ಲದೇ ನಿರ್ಮಿತಗೊಂಡಿದ್ದಳವಳು! ಬಹುಶಃ ಬ್ರಹ್ಮ ತಾಜಮಹಲನ್ನ ಕೆತ್ತಿಸಲು ನೇಮಿಸಿದ ಶಿಲ್ಪಿಗಳಿಗೇ, ಇವಳನ್ನ ಕಡೆಯಲು ಗುತ್ತಿಗೆ ಕೊಟ್ಟಿರಬೇಕು ಅನಿಸಿಬಿಟ್ಟಿತು. ಶಿಲ್ಪಿಗಳಾದರೋ... ಅವಳನ್ನ ತಾಜಮಹಲಿಗಿಂತಲೂ ಒಂದು ಕೈ ಜಾಸ್ತಿನೇ ಪೆಟ್ಟುಕೊಟ್ಟು ಅವಳನ್ನ ನಿರ್ಮಿಸಿರಬಹುದೇನೋ!! ಅವಳನ್ನು ನೋಡಿದ ಯಾವ ಬ್ರಹ್ಮಾಚಾರಿಯಾದರೂ.... ಕರಿಗಿ ಹೋಗಬಲ್ಲ!! ಅಂತದ್ದರಲ್ಲಿ ನಾನು ಕೂಡ ಕರಗಿದ್ದರಲ್ಲಿ ಅತಿಶಯೋಕ್ತಿ ಇಲ್ಲಾ!! ಇಷ್ಟು ಅನಿಸಿದ್ದು ನಾನು ಅವಳು ಬಸ್ಸು ಹತ್ತಿ ಬಂದ ತಕ್ಷಣ. ಅವಳು ಬಂದು ನನ್ನ ಮುಂದಿನ ಸೀಟಿನಲ್ಲಿ ನನಗೆ ಬೆನ್ನು ಮಾಡಿಕುಳಿತುಕೊಂಡಿದ್ದಳು. ನಾನು ನಿಂತುಕೊಂಡ ಸಮಯದಲ್ಲಿ....... ಅವಳ ಮುಖಾರವಿಂದದ ಮತ್ತೂ ಸೌಂದರ್ಯವನ್ನ ಸವಿಯಲು ನನ್ನಿಂದ ಸಾಧ್ಯವಾಯಿತು. ಅವಳ ಆ ಹಣೆಯಲ್ಲಿನ ಬಿಂದಿ ಚಂದಿರನನ್ನ ನೆನಪಿಸುತಿತ್ತು, ಹಣೆ ಆ ಚಂದಿರನ ಬೆಳದಿಂಗಳನ್ನ, ಆ ಬೆಳದಿಂಗಳಲ್ಲಿ ಸ್ವಚ್ಛಂದವಾಗಿ ವಿಹರಿಸುವ ಬಯಕೆಯುಂಟುಮಾಡುತಿತ್ತು. ಆ ಕಣ್ಣುಗಳು ಸರೋವರವನ್ನ ನೆನಪಿಸಿ.... ಅಲ್ಲಿ ಮೀನಿನಂತೆ ನಲಿಯುವಂತೆ ಮಾಡುತಿತ್ತು, ಆ ಮೂಗು.... ಹಿಮಾಲಯವನ್ನ ನೆನಪಿಸಿ.... ಅಲ್ಲಿಂದ ಜಾರುವ ಹಿಮಬಿಂದುವಂತೆ ನನ್ನನ್ನ ಜಾರುವಂತೆ ಮನವು ಪ್ರೇರೆಪಿಸುತಿತ್ತು, ಅವಳ ಆ ಕಪೋಲಗಳು.... ಮಾಗಿದ ಮಾವಿನ ಹಣ್ಣನ್ನ ನೆನಪಿಸಿ, ಕಚ್ಚಿತಿನ್ನುವಂತೆ ಮನವು ಕಾಡಿಸುತಿತ್ತು, ಆ ತುಟಿಗಳು.... ಕೆಂಪು ರೋಜಾವನ್ನು ನೆನಪಿಸಿ, ದುಂಬಿಯಾಗಿ ಅಲ್ಲಿರುವ ಮಧುವನ್ನ ಹೀರುವಂತೆ... ಮನವನ್ನ ಹುಚ್ಚೆಬ್ಬಿಸುತಿತ್ತು..... ಒಟ್ಟಿನಲ್ಲಿ ಆಗ ನಾನು.... ನಾ ನಾಗಿರಲಿಲ್ಲ......!! ಅವಳಲ್ಲಿಯೇ ಐಕ್ಯನಾಗಿಬಿಟ್ಟಿದ್ದೆ, ಅವಳ ಸ್ಟಾಪ್ ಬಂದು ಇಳಿದು ಹೋದಳು ಅವಳು. ಅವಳನ್ನ ಕಳೆದುಕೊಂಡ ನನ್ನೀಮನವು...... ಇಬ್ಬನಿಯ ಹನಿಯನ್ನ ಕಳೆದುಕೊಂಡ... ಪಾಳು ಬಲೆಯಾಗಿ ಜೋಲಾಡುತ್ತಿದೆ! ಇನ್ನು ಈ ಬಲೆಯಲ್ಲಿ ನನ್ನ ಹಣೆಬರಹವು...... ಯಾವ  ಮಾಯಾಂಗನೆಯ ಚಿಗುರುಬೆರಳಿನ ತುದಿಯಿಂದ ಹಾರಿದ ಹನಿಯಿಂದ ಮತ್ತೆ ಜೀವ ಕಳೆ ಬರುವಂತೆ ಮಾಡುವುದೋ ನಾ ಕಾಣೇ!!! ಹೂಂ........ : (
     

ಭಾನುವಾರ, ಆಗಸ್ಟ್ 28, 2011

ಖಾಲಿಯಾದ ಜೋಗಯ್ಯನ ಜೋಳಿಗೆ..:’(

 
      "ಪ್ರತಿಯೊಬ್ಬ ಮಹಾಪುರುಷನ ಹಿಂದೆ ಒಬ್ಬಳು ಸ್ತ್ರೀ ಇದ್ದೇ ಇರುತ್ತಾಳೆ" ಆಹಾ..!! ಆಹಾ..!! ಎಂಥಾ ಮಾತು..?? ಮುತ್ತಿನಂತ ಮಾತು. ಈವಾಗ ಜನರಾಡುವ ಮಾತು "ಅದೇ "ಮಹಾ"ಪುರುಷನ ಜೊತೆ ಸ್ತ್ರೀ ಇದ್ದರೆ!!?? ಅವನು ಸಿ.ಡಿ. ಲಿರ್ತಾನೆ!!!" ಛೀ...!! ಛೀ...!! ಎಂತಾ ಮಾತು...?? ಮುತ್ತಿಗೆ ಕಲ್ಲೆಸೆಯುವ ಮಾತು..! ಅಂತಿಂಥಾ ಕಲ್ಲಲ್ಲಾ ರೀ...! ಛಪಡಿ ಕಲ್ಲು. ಎಸದ್ಮೇಲೆ  ಎದ್ದೇಳ್ಬಾರ್ದು. ಏನು ಮಾಡೋದು ಸಾಮಿ?? ಈಗಿನ ಕಾಲವೇ ಅಂತದ್ದು. ಎಲ್ಲವೂ ಸ್ತ್ರೀ ಶಕ್ತಿಯ ಮಹಿಮೆಯೇ...!!

                                               ***************************

             ಬೇಕಿತ್ತಾ?? ಬೇಕಿತ್ತಾ?? ಈ ಪಾಟಿ ರಾಮಾಯಣ. ನೆಟ್ಟಗೆ "ಬನ್ನಿ ಸಾಮಿ, ನಮ್ಮ ಶಿವಣ್ಣೋರ ನೂರನೇ ಸಿನಿಮಾ ಬಿಡುಗಡೆ ಆಗ್ತೈತೆ. ನೋಡಿ ಖುಸಿ ಪಟ್ಟು, ನಮ್ಗೆ ಹಾರೈಸಿ" ಅಂತ ಅನ್ನೋದ ಬಿಟ್ಟು, ವಾರದ ಮೊದಲೇ ಟಿಕೇಟ್ ಮಾರಾಟಕ್ಕಿಟ್ಟು.. ಇವಾಗ ಕುಂಯ್ಯೋ... ಮುರ್ರೋ... ಅಂದ್ರೆ ಕೇಳೋರ್ಯಾರು?? ನೋಡೋರ್ಯಾರು??
                 
           ಹೆಂಗೋ ಒದ್ದಾಡಿ. ಬಿದ್ದಾಡಿ, ಜಗ್ಗಾಡಿ... ಬ್ಲಾಕ್ ಲಿ ಖರೀದಿ ಮಾಡಿ, ಪೋಲಿಸಣ್ಣನ ಕೈಲಿ ಲಾಟಿ ರುಚಿ ನೋಡಿ ಟಿಕಿಟ್ ತಕಂಡು, ಥಿಯೇಟ್ರಾನಾಗ ಕುತ್ಗಂಡಿ ನೋಡೋಕಾಗ್ದೆ, ಅರ್ಥ ಆಗ್ದೇ, ತಲೆನ ಪರ-ಪರ ಕೆರ್ಕಂಡಿ, ಮದ್ಯೆ-ಮದ್ಯೆ ಸೊಳ್ಳೆ, ತಿಗಣೆ ಕಾಟಕ್ಕೂ ಮೈಯೆಲ್ಲಾ ಪರಚ್ಗೋಳ್ತಾ.... ಎದ್ದುಬಂದು, ಕಷ್ಟಪಟ್ಟು ಗಳಿಸಿರೋ ದುಡ್ಡು ಏನೂ ಪ್ರಯೋಜನಕ್ಕಿಲ್ದೇ, ಯಾರ್ದೋ ಕಿಸೆ ಸೇರ್ತಲ್ಲಾ ಅನ್ನೋ ನೋವಿಗೆ ನಾಲ್ಕು ಮಾತು ಆಡಿರ್ತಾರೆ! ಆ ಮಾತಿಗೆ..."ಅಯ್ಯೋ ಜನ ಇಷ್ಟಪಡೋಹಂಗೆ ನನ್ಹತ್ರ ಮಾಡೋಕಾಗಿಲ್ವಲ್ಲಾ.." ಅಂತ ತಪ್ಪನ್ನ ತಿದ್ಕಳೋದು ಬಿಟ್ಟು, ಮಕಾಡೆ ಮಲಗಿ... "ಜನ್ರೇ ಸರಿಇಲ್ಲಾ" ಅಂದ್ಬಿಟ್ರೆ..?? ಜೋಗಯ್ಯನ ಜೋಳ್ಗಿಗೆ ಹಾಕಿರೋ ಕಾಸು.. ಬಂದ್ಬಿಡ್ತದಾ?? ವಸಿ ನೀನೆ ಹೇಳು ಮಗಾ...
      
        ನಮ್ಮ "ಅಣ್ಣಾ" ಅಣ್ಣೋರ ಗಾಳಿ ಇಷ್ಟು ಜೋರಾಗಿ ಬೀಸುತ್ತಿರುವಾಗ, ಕಳ್ ರಾಜಕಾರಣಿಗಳೆಲ್ಲಾ " ಹಯ್ಯೋ ದೇವ್ರೆ... ತಲೆ ವೊಡ್ದು ಗಳ್ಸಿರೋ ದುಡ್ಡೆಲ್ಲಾ ಯಾವಾಗ ಹೊರಬಿದ್ದೋಗ್ಬಿಡುತ್ತೋ!!?" ಅನ್ನುತ್ತಾ... ದೇವ್ರಿಗೆ ಆರ್ತಿ ಎತ್ತುತ್ತಾ, ಹುಂಡಿ ತುಂಬಿಸುತ್ತಿರುವಾಗ, ಆ ದುಡ್ಡನ್ನೆಲ್ಲಾ ಲೆಕ್ಕ ಮಾಡ್ತಾ, ಬಿಜಿಯಾಗಿರುವಾಗ.... ಇವ್ರ ಮದ್ಯೆ, ನಾಲ್ಕು ಕಾಸು ಮಾಡ್ಕಂತೀನಿ ಅಂತ ಆಸೆ ಮಾಡ್ಕಂಡು "ಪ್ರೇಮ" ಗೀತೆ ಹಾಡ್ಬಿಟ್ರೆ.... ಲಕ್ಷ್ಮಿ ವಲಿತಾಳ ಸಾಮಿ???

          "ತತ್ತಾರ್ಲಾ ಇಲ್ಲಿ... ನಿತ್ಯಾನಂದನ ಸೀಡಿ ನೇ;  ಈ ಪಿಚ್ಛರ್ಗಿಂತ ಆ ನಿತ್ಯ ಆನಂದ ಕೊಡಾ ಅದೇ ಎಷ್ಟೋ ವಾಸಿ ಕಣ್ಲಾ...!! "  ಅನ್ನೋ ಮಾತು ಬರೋ ಈ ಕಾಲ್ದಲ್ಲಿ, ಮಚ್ಚು ಹಿಡಿದು "ಪೀಸು" ಕತ್ತರ್ಸೋ ಸೀನು ಇದ್ದಿದ್ರೆ....!! ಆವಾಗಿನ ಕಥೆಯೇ ಬೇರೇ ಇರ್ತಿತ್ತೇನೋ??? 
                                     ***********************************
 
       ಏನೇ ಇರ್ಲಿ.... ನಮ್ಮ "ಅಣ್ಣಾ" ಅಣ್ಣೋರ್ಗೆ ಜಯಸಿಗ್ತು..."ಸತ್ಯಕ್ಕೆ ಸಾವಿಲ್ಲ, ಸುಳ್ಳನ್ನ ಕಟ್ಗಂಡ್ರೆ ಛಪಡಿ ಕಲ್ಲು ಮೈ-ಮೇಲೆ" ಅನ್ನೋ ಮಾತು ಮತ್ತೆ ಸಾಬೀತಾಯ್ತು... ಜಯ್ ಹಿಂದ್.... :)


ಸೋಮವಾರ, ಆಗಸ್ಟ್ 22, 2011

ಹರ್ ಏಕ್ ಫ್ರೆಂಡ್ ಝರೂರಿ ಹೋತಾ ಹೈ... :)


                
 ಹ್ಹ... ಹ್ಹ... ನಾನು ಹೀಗೊಬ್ಬ ಸ್ನೇಹಿತನನ್ನ ಪಡೆದುಕೊಳ್ಳುತ್ತೇನೆಂದು ಕನಸ್ಸು-ಮನಸ್ಸಿನಲ್ಲಿಯೂ ಅಂದು ಕೊಂಡಿರಲಿಲ್ಲ! ಕಣ್ಣು ಮುಚ್ಚಿದರೆ ಸಾಕು, ಮನಸ್ಸಿನಲ್ಲಿಯೇ ಅವನ ಆಟಾಟೋಪ ಹೇಳ ತೀರಲಾಗದು... ಕೆಲವೊಮ್ಮೆ ಹುಚ್ಚೆದ್ದು ಕುಣಿಸಿದರೆ, ಕೆಲವೊಮ್ಮೆ ಮಂದವಾಗಿ ಕುಳ್ಳಿರಿಸಿಕೊಂಡು ಬಿಡುತ್ತಾನೆ... ಕೆಲವೊಮ್ಮೆ ಪ್ರೀತಿಯ ಸಾಗರವನ್ನೇ ಹರಿಸಿ ಬಿಡುತ್ತಾನೆ!! ಆದರೆ ಪ್ರತಿ ಸಂದರ್ಭದಲ್ಲೂ ಆ ಆ ಭಾವನೆಯನ್ನೇ ಮನಸೇಚ್ಛ ಅನುಭವಿಸಲು ಬಿಟ್ಟು ಬಿಡುತ್ತಾನೆ!! ಕೊನೇಗೆ........ ಸುಮ್ಮನೆ..... ನೆಮ್ಮದಿಯಾಗಿ ಆಹ್ಲಾದತೆಯನ್ನ ಉಂಟುಮಾಡಿ ತಣ್ಣಗಾಗಿಬಿಡುತ್ತಾನೆ....

         ಆದರೆ ಅವನ ನೋವನ್ನ ಮಾತ್ರ... ಅಬ್ಬಬ್ಬ!! ಬೊಬ್ಬೆಹಾಕಿಸಿ ಬಿಡುತ್ತಾನೆ!! ಅವನು ನೋವು ಪಟ್ಟದಿನಗಳಲ್ಲಿ, ಧಾರಕಾರವಾಗಿ ನನ್ನ ಕಣ್ಣಿನಲ್ಲಿ ನೀರು ಬಂದಿಲ್ಲ ಹಾಗೆ ಅಂದಿಟ್ಟುಕೊಟ್ಟುವಹಾಗೆ ಇಲ್ಲ!! ಹಾಗೇ... ನನ್ನ ಕಣ್ಣಿನಲ್ಲಿ ನೀರು ನೋಡಿದ ತಕ್ಷಣ ಅವನ ನೋವು ಮರೆತೇ ಹೋಗಿ ಬಿಡುತ್ತೆ ಅಂತೀನಿ!! "ಏನೋ ಇದು... ಚಿಕ್ಕ ಮಕ್ಕಳ ತರ ಅಳ್ತಾ ಇದೀಯಾ?? ನಾಚಿಕೆ ಆಗಲ್ವಾ ನಿಂಗೆ??? ಹೀಗೆ ಅಳುವಂತದ್ದು ನಿಂಗೇನಾಯ್ತೋ?? ಹ್ಹೆ.. ಹ್ಹೆ... ತೇಟ್... ಕೆಂಪುಮೂತಿ ಮಂಗನೇ ನೀ..." ಅಂತ ನಂಗೆ ಛೇಡಿಸಲು ಪ್ರಾರಂಭಿಸಿ ಬಿಡುತ್ತಾನೆ!! ನನ್ನ ಕಣ್ಣೋ.... ಆಶ್ಚರ್ಯದಿಂದ ತನ್ನ ಕಣ್ಣೀರನ್ನೇ ಮರೆತು, ಅವನನ್ನೇ ನೋಡುತ್ತಾ ನಿಂತುಬಿಡುತ್ತದೆ!! "ಇವನು ನಿಜವಾಗಲೂ ಮಂಗನೇ!!" ಅನಿಸಿ ಬಿಡುತ್ತೇನೋ ಅದಕೆ..! "ಅಲ್ಲ ಕಣೋ.. ನೀ ಇಷ್ಟು ನೋವು ಅನುಭವಿಸುತ್ತಿದ್ದೀಯಾ.. ನಿಂಗೇನು ಅನಿಸ್ತಾನೆ ಇಲ್ವಾ??" ಅಂತ ನನ್ನ ಕಣ್ಣು ಕೇಳಿದರೆ  , ಅವನು ಹೇಳುವುದನ್ನ ತನ್ನನ್ನ ತಾನು ಮಿಟುಕಿಸುವಮೂಲಕ ತನ್ನ ಮೆಚ್ಚಿಗೆಯ ಭಾವವನ್ನ ಹೊರಗೆಡಹುತ್ತದೆ !!! "ಹ್ಹೀ.. ಹ್ಹೀ.. ನೋವು?? ನಾನು ಅದು, ತುಂಬು ಸ್ನೇಹಿತರು.. ನಾನು ಹುಟ್ಟಿದಾಗಿನಿಂದ ನನ್ನನ್ನ  ಆಪ್ತಮಿತ್ರನನ್ನಾಗಿ ಮಾಡಿಕೊಂಡು ಬಿಟ್ಟಿದೆ!! ನನ್ನ ನೋಡದೇ  ನಿದ್ದೆನೇ ಬರುವುದಿಲ್ಲವಂತೆ!!! ಅದಕೆ ಆಗಾಗ ಹೀಗೆ ಬಂದುಹೋಗಿ ಮಾಡುತ್ತ, "ನನ್ನ ಮರಿಬೇಡ ಕಣೋ....."  ಎಂದು ನನ್ನನ್ನ ಆವರಿಸಿ ಅವನನ್ನ ಅವನು ಸಾಂತ್ವಾನ ಮಾಡಿಕೊಳ್ಳುತ್ತಿರುತ್ತಾನೆ! ಅದಕೆ ನೀನ್ಯಾಕೆ ಅಳೋದು ಮರಾಯಾ??
       ಇಸ್ ಜೀವನ್ ಹೇ... ಇಸ್ ಜೀವನ್ ಕಾ.... ಯಹಿ ಹೇ ಯಹೀ ಹೇ ರಂಗರೂಪ್... ಥೋಡಿ ಗಮ್ ಹೇ... ಥೋಡಿ ಖುಷಿಂಯಾ....." ಅಂದು ಬಿಡುತ್ತಾನೆ.... ಹ್ಹ ಹ್ಹ.... ನಿಮಗೂ ಇವನೂ ಪಕ್ಕಾ ಮಂಗನೇ ಅನಿಸಿರಬೇಕಲ್ವಾ???
             ಇನ್ನೂ ಸ್ವಲ್ಪ ಮುಂದೆ ಹೋಗುವಾ....... ಇವನ ಸಂತೋಷದ ದಿನವನ್ನ... ಕ್ಷಣವನ್ನ.... ಇವನದೇ ಆದರೀತಿಯಲ್ಲಿ ಆಚರಿಸುತ್ತಾನೆ!! ನನ್ನನ್ನೂ ಅಷ್ಟೇ ಆನಂದದಲ್ಲಿ ತೇಲಿಸುತ್ತಾನೆ ಕೂಡ.... ಆದರೆ ವಿಶೇಷವೆಂದರೆ... ಆಗಿ ಹೋದ ಸಂತೋಷದ ಘಟನೆಗಳನ್ನ... ನೆನೆಸಿಕೊಳ್ಳುವ ಪ್ರಯತ್ನ ಮಾಡಿದರೆ..." ಆದದ್ದು..ಅದು ಏನೇ ಇದ್ದರೂ... ಪುನಃ ನೆನಪಿಸಿ ಕೊಳ್ಳಬೇಡ... ಹೊಸದಾದದ್ದೇನಾದರೂ ಸಂತೋಷಿಸುವ ಕ್ಷಣಗಳನ್ನ ಹುಡುಕು ಮಾರಾಯಾ..." ಅನ್ನುತ್ತಾ... ಸಪ್ಪೆಮೋರೆಹಾಕಿ ಬಿಡುತ್ತಾನೆ...!! ಅಂದರೆ ಪ್ರತಿಕ್ಷಣವೂ ಕೂಡ ಹೊಸದು.... ಅದನ್ನೇ ಹಾಗೆ ಅನುಭವಿಸುತ್ತಾ ಸಾಗು.... ಅನ್ನುವ ಭಾವ ಅವನಲ್ಲಿ ಮೂಡಿದ್ದನ್ನ ನೋಡಿ, ನನ್ನನ್ನ ಆನಂದ ಪುಳುಕಿತನನ್ನಾಗಿ ಮಾಡಿಬಿಡುತ್ತದೆ!!



                ಯಾಕಪ್ಪಾ........ ಈ ದಿನ ಹೀಗೆ??? ಏನೂ ಮಾಡಲು ಮನಸ್ಸೇ ಇಲ್ಲ......., ಛೇ!! ಆ ಕೆಲ್ಸ ಮಾಡ್ಬೇಕೇನೋ??? ಯಾಕೋ ಬೇಜಾರ್ರು ಕಣೋ!! " ಅನ್ನುತ್ತಾ... ನಾನು ಕುಳಿತು ಕೊಂಡೆ ಅಂದು ಕೊಳ್ಳಿ.... ಅವತ್ತು ಇದೆ ನನಗೆ ಗ್ರಾಚಾರ!! ತಿಂದು ತೇಗಿಬಿಡುತ್ತಾನೆ ನನ್ನನ್ನ!!! ಅವನ ಮಾತಿಗೆ ಹೆದರಿಯೇ ನನ್ನೆಲ್ಲ ಕೆಲಸಗಳು ಮಾಡಿ-ಮುಗಿದು ಹೋಗಿಬಿಡುತ್ತದೆ...ಆದರೆ ಅವನು ಮಂದನಾದರೆ ಮಾತ್ರಾ..... ನನ್ನ ಕೆಲಸ ಆಗುವುದೂ... ಆಗದೇ ಇರದಂತಾಗಿಬಿಡುತ್ತದೆ......!
                      ಇನ್ನೂ ತಮಾಷೆ ವಿಷಯವೆಂದರೆ.... ಕೆಲವೊಮ್ಮೆ ತೀರ ಮಂಗನಾಗಿ ಬಿಡುತ್ತಾನೆ ಕೂಡ!!!.... ಏನೋ ಒಂದು ಆಲೋಚಿಸಿ, ಅದನ್ನ ಅಧ್ವಾನಮಾಡಿಕೊಂಡು ಪೇಚಾಡುವುದನ್ನೇ ನೋಡುವುದು ಬಲುಮೋಜಾಗಿ ಬಿಡುತ್ತದೆ!!! ಆದರೆ... ಏನೇ ಬರಲಿ.... ಏನೇ ಆಗಲಿ.... ಅವನು ನನ್ನ ಸಾಂಗತ್ಯವನ್ನ ಮಾತ್ರಾ ಬಿಡುವುದಿಲ್ಲ...!! ಏಕಿಷ್ಟು ಖಡಾ-ಖಂಡಿತನಾಗಿ ಹೇಳುತ್ತಿದ್ದೇನೆ ಅಂದು ಕೊಳ್ಳುತ್ತಿರುವಿರೋ...??  ಕೇಳಿ...... ನಾನು ತೊಂದರೆ ಒಳಗಾದರೆ.... ತಕ್ಷಣ ನನ್ನನ್ನ ಸಾಂತ್ವಾನ ಮಾಡಿಲಿಕ್ಕೆ ಧಾವಿಸುತ್ತಾನೆ, ನನಗೆ ಬುದ್ಧಿ ತಿಳಿದಾಗಿನಿಂದಲೂ ನನ್ನೋಟ್ಟಿಗೇ.. ಆಡಿ-ನಲಿದಿದ್ದಾನೆ..., ನನ್ನಿಂದ ಯಾರಾದರೂ ದೂರವಾಗಲ್ಪಟ್ಟಿದ್ದರೆ... "ನಿನಗೆ ನಾನಿದ್ದೀನಲ್ಲಾ.... ಮತ್ಯಾರು ಬೇಕು ನಿನಗೆ?" ಎಂದು ಪ್ರಶ್ನಿಸುತ್ತಾನೆ..... ನನ್ನ ಯಾವಾಗಲೂ ನಗು-ನಗುತಾ ಇರಲು ಬಯಸುತ್ತಾನೆ ಕೂಡ....

        
                    ಮತ್ತೂ ವಿಶೇಷವೆಂದರೆ..... ಅವನು ಒಂದು ಕ್ಷಣವೂ ಕೂಡ ನನ್ನ ಬಿಟ್ಟಿದ್ದಿಲ್ಲ... ನಿದ್ದೆಯಲ್ಲಿಯೂ ಕನಸಿನ ರೂಪದಲ್ಲಿ ಬಂದು ನನ್ನ ಯೋಗಕ್ಷೇಮ ವಿಚಾರಿಸುತ್ತಾನೆ ಕೂಡ!!  ನನಗೆ ತಿಳಿದ ಹಾಗೆ, ಯಾರಿಗೂ ಕೆಟ್ಟದ್ದು ಬಯಸಿಲ್ಲ ಅವನು!!! ಅವನಿಗೆ ಕೇಡು ಬಗೆದರೆ.... "ಇರಲಿ ಬಿಡೋ... ಇದೆಲ್ಲಾ ಮಾಮೂಲು ಅಲ್ವೇನೋ??".. ಅಂದು ಬಿಡುತ್ತಾನೆ ನಗುತ್ತಾ!! ಒಳ್ಳೆಯದನ್ನೇ... ಕಲಿಯುವಂತೆ ಮಾಡುತ್ತಾನೆ... ತಿಳಿಸುತ್ತಿರುತ್ತಾನೆ... ತೋರಿಸುತ್ತಿರುತ್ತಾನೆ ಕೂಡ....!! ಇಂತವನು ಹೇಗೆ ನನ್ನ ಬಿಡಲು ಸಾಧ್ಯ ಹೇಳಿ?? ಹಾಗೆ ಅವನು ಬಿಟ್ಟರೂ.... ಅವನನ್ನ ನಾ ಬಿಡಬೇಕಲ್ಲಾ!!??.... ಅವನು ನನ್ನವನೇ... ಎಂದೆಂದಿಗೂ ಕೂಡ... ನನಗಾಗಿಯೇ ಅವನು ಹುಟ್ಟಿರುವುದು...!!
        
               ಕೊನೇಗೆ ಮತ್ತೊಂದು  ಹುಚ್ಚಾಟವನ್ನ ಹೇಳಲು ಮರೆತಿದ್ದೆ... ಇದನ್ನ ಹೇಳಿ ಈ ದಿನ ಸುಮ್ಮ ನಾಗುತ್ತೇನೆ.... ಹೆ ಹೆ ಹೆ........ ಅವನು ಪ್ರೀತಿಯಲ್ಲಿ ಬಿದ್ದಿರುವಾಗಿನ.... ಅವನ ಪಾಡು...!! ಪ್ರೀತಿಯಿಂದ ಎಷ್ಟೇ ಪೆಟ್ಟು ಬಿದ್ದಿರಲಿ.... ಮತ್ತೆ-ಮತ್ತೆ ಹೊಸ ಪ್ರೀತಿಯಲ್ಲಿ ಹೊಸತನವನ್ನ ಬಯಸುತ್ತಾನೆ!!! ಪ್ರತಿ ಪ್ರೀತಿಯನ್ನೂ ಮೊದಲ ಪ್ರೀತಿಯೆಂದೇ ತಿಳಿದುಕೊಂಡು ಪ್ರೀತಿಸುತ್ತಾನೆ ಕೂಡ!! ಅಷ್ಟೇ ಅದರಿಂದ ಪೆಟ್ಟುತಿಂದು ನೋವನ್ನು ಅನುಭವಿಸುತ್ತಾನೆ ಕೂಡ!! ಇಂತ ಸಮಯದಲ್ಲಿ ನಾನೆಲ್ಲಾದರೂ.... "ಯಾಕಪ್ಪಾ ನೀನು ಹೀಗೆ??" ಅಂತ ಅವನಲ್ಲಿ ಕೇಳಿಬಿಟ್ಟೆ ಅಂದಿಟ್ಟು ಕೊಳ್ಳಿ.... ಅವನ ನಗೆಯನ್ನ ನೋಡಿ... ನನ್ನ ನಗುನ ತಡೆಯಲಾಗುವುದೇ ಇಲ್ಲ!!! ಇವನು ತೀರಾ... ನನ್ನವನಾದ ಹುಚ್ಚ ಕಣ್ರೀ..... ಹೆ ಹೆ ಹೆ.......... ಏನೇ ಆಗಲಿ........ ಪ್ರತಿಯೊಬ್ಬನಿಗೂ ಸ್ನೇಹಿತನು ಬೇಕೆ ಬೇಕು..... ಅದೂ "ನನ್ನಲ್ಲಿನ" ಈ ಸ್ನೇಹಿತನು............ ಹೆ ಹೆ ಹೆ........ ಮುಂದೆ ಬೇಡ...........
                 ಹೋಯ್...... ಇಷ್ಟೇ ಅಲ್ಲ........ ಅವನು ಮುಂದೆ  ಮಾಡುವ ಅವಾಂತರವನ್ನ...... ಇದೇ ಬ್ಲಾಗಿನಲ್ಲಿ.... ಮುಂದೆ ತೀಳಿಸುತ್ತಲೇ ಇರುತ್ತೇನೆ.... ನೀವು ನನ್ನ ಜೊತೆಗಿದ್ದು.... ಅದನ್ನ ಆನಂದಿಸುವಿರಲ್ಲವೇ?????

ಮಂಗಳವಾರ, ಆಗಸ್ಟ್ 2, 2011

ಹೊಂಬೆಳಕು......

ಆ ಒಂದು ದಿನ, ಸಾಯಂಕಾಲ, ದಿನವು ಕತ್ತಲೆಯ ಕಡೆಜಾರುತಿತ್ತು. ನನ್ನ ಮನದಂಗಳವೂ ಕೂಡ ಯಾವುದೋ ಅರಿವಿಲ್ಲದ  ಕತ್ತಲಿನಲಿ ಅಲೆದಾಡುವಂತಿತ್ತು.  ಅಂತರಾಳದಲಿ ಯಾವುದೋ ವೇದನೆ. ಎಲ್ಲೋ ಎಡವುತ್ತಿರುವೆನೆಂಬ ಭಾವನೆ! ಆ ಕ್ಷಣ, ಏನು ಮಾಡಬೇಕೆಂದರಿಯದೇ...... ಕಣ್ಣಿಗೆ ಬಿದ್ದ, ಯಂಡಮೂರಿಯ, "ವಿಜಯದ ಸಂಗಾತಿ" ಯ ಯಾವುದೋ ಪುಟವನ್ನ ತೆರೆದು ಕುಳಿತೆ..... 
********************************

                        1989ರಲ್ಲಿ ಆರ್ಮೇನಿಯಾದಲ್ಲಿ ನಡೆದ ಭೂಕಂಪವು ಸುಮಾರು 30,000ದಷ್ಟು ಜನರನ್ನ ಆಹುತಿ ತೆಗೆದು ಕೊಂಡಿತ್ತು. ಆ ಸಂದರ್ಭದಲ್ಲಿ, ತಂದೆ ಮಗನನ್ನು ಹುಡುಕುತ್ತಾ ಶಾಲೆಗೆ ಬರುತ್ತಾನೆ. ಮಗನನ್ನು ಶಾಲೆಗೆ ಬಿಟ್ಟಸಂದರ್ಭದಲ್ಲಿ,ಮಗ ಯಾವ ಕೋಣೆಯತ್ತ ಓಡಿಹೋಗುತ್ತಿದ್ದನೋ ಆ ದಿಕ್ಕಿನ ಕಡೆ ಸಾಗಿ ಭೂಮಿಯ ಮೇಲೆ ಹೂತು ಹೋದ ಎರಡು ಅಂತಸ್ತಿನ ಕಟ್ಟಡದ ಮಣ್ಣಿನ ರಾಶಿಯನ್ನ ಸರಿಸತೊಡಗುತ್ತಾನೆ.ಸಮೀಪದಲ್ಲಿಯೇ ಸ್ಫೋಟಗೊಂಡ ಜ್ವಾಲಾಮುಖಿಯ ದಗೆ,ಉರುಳಿಬಿದ್ದ ಕಟ್ಟಡಗಳ ಮಣ್ಣಿನ,ಕಲ್ಲುಗಳ ರಾಶಿ,ಭೂಕಂಪದ ಹೊಡೆತಕ್ಕೆ ಸಿಲುಕಿರುವವರ ಆಕೃಂದನ, ಮತ್ತೆ ಭೂಕಂಪನ ಸಂಭವಿಸಲಿದೆ ಎಂಬ ವಾರ್ತೆಯಿಂದ ಪುನಃ ಜೀವ ಉಳಿಸು ಕೊಳ್ಳಲು ಓಡುವವರು.. 
                      
                       ಈ ರೀತಿಯಾದ ಗೊಂದಲಮಯ ವಾತಾವರಣದಲ್ಲಿಯೂ ಏಕಾಗ್ರತೆಇಂದ ಉರುಳಿಬಿದ್ದ ಕಟ್ಟಡದ ಕಲ್ಲಿನ ರಾಶಿಯನ್ನು ಸರಿಸುತಿದ್ದನು ಆತ. ದುಃಖ ಉಮ್ಮಳಿಸಿ ಬರುತ್ತಿದೆ.ಮಗನಿಗೆ ಬಾರಿ ಬಾರಿಯೂ ಹೇಳುತ್ತಿರುವ ಈ ಮಾತು ನೆನಪಿಗೆ ಬರುತ್ತಿದೆ 'ಮಗನೇ.. ನಿನಗೆ ಏನೇ ಕಷ್ಟ ಬಂದರೂ ನನ್ನನ್ನು ನೆನೆಸಿಕೋ, ನಿನ್ನ ನೆರವಿಗೆ ನಾ ಬರುತ್ತೇನೆ' ಎಂದು. 


                              ಸ್ವಲ್ಪ ಹೊತ್ತಿನ ನಂತರ ಉಳಿದ ಮಕ್ಕಳ ತಂದೆ-ತಾಯಿಯರೂ ಅಳುತ್ತ,ರೋಧಿಸುತ್ತಾ ಬರುತ್ತಾರೆ. ಕೆಲವರು ಇವನ ಸಹಾಯಕ್ಕೆ ನಿಂತರೆ,ಕೆಲವರು ಹಾಗೆ ಮಾಡಬೇಕು, ಹೀಗೆ ಮಾಡೋಣವೆಂಬ ಸಲಹೆ ನೀಡತೊಡಗುತ್ತಾರೆ.ಕೆಲವರು ಅಗ್ನಿಶಾಮಕಕ್ಕೆ ಕರೆಯನ್ನೂ ಕಳುಹಿಸುತ್ತಾರೆ, ಆದರೆ ಅಲ್ಲಿಗೆ ಬರಲಾಗುವುದಿಲ್ಲ ಎಂಬ ಮಾತು ಅವರಿಂದ ಬರಲ್ಪಡುತ್ತೆ. ಆರ್ಮೇನಿಯಾ ಒಂದು ಬಡ ದೇಶ. ಅಲ್ಲಿ ಇರುವುದೇ ನಾಲ್ಕು ಅಗ್ನಿಶಾಮಕ ಗಾಡಿಗಳು, ಅವರಾದರೂ ಎಲ್ಲಿಯೆಂದು ಬರುವುದು? ಇಡೀ ನಗರವೂ ಹಾನಿಗೊಳಗಾಗಿದೆ. ಎರಡು ದಿನದಲ್ಲಿ ಮಕ್ಕಳ ದೇಹವು ಕೊಳೆತು ನಾರತೊಡಗುತ್ತದೆ,ಅಷ್ಟರೊಳಗೆ ದೇಹವನ್ನು ಹುಡುಕಿ, ಗುರುತಿಸಿ ತೆಗೆದುಕೊಂಡು ಹೋಗಬೇಕೆಂಬ ತವಕ ಉಳಿದವರಲ್ಲಿ. ಸಂಜೆಯಾಗುತ್ತದೆ, ಎಲ್ಲರು ಹಿಂತಿರುಗುತ್ತಾರೆ. ಆದರೆ ಅವನು ಮಾತ್ರ ತನ್ನ ಪ್ರಯತ್ನವನ್ನು ಮಾಡುತ್ತಲೇ ಇದ್ದ.ಮರುದಿನ ಮತ್ತೆ, ಕೆಲವರು ಬರುತ್ತಾರೆ,ನಾಳೆ ಛೀಫ್ ಇನ್ನೂ ಹೆಚ್ಛು ಜನರನ್ನ ಕಳಿಸುತ್ತಾರಂತೆ ಎಂಬ ಮಾತನಾಡತೊಡಗುತ್ತಾರೆ. ಅವನು ಹೇಳುತ್ತಾನೆ 'ನೀವು ನನಗೆ ಸಹಾಯ ಮಾಡಿ, ಇಲ್ಲಾ ಅಂದರೆ ನನ್ನ ಸಮಯವನ್ನ ವ್ಯರ್ಥ ಹಾಳುಮಾಡಬೇಡಿ' ಅದಕ್ಕೆ ಕೆಲವರು ಹ್ನ್ಯೂ ಗುಟ್ಟು ಸಹಾಯಕ್ಕೆ ನಿಂತರೆ, "ಇವನಿಗೆಲ್ಲೋ ಹುಚ್ಚುಹಿಡಿದಿದೆ" ಅಂದುಕೊಳ್ಳುತ್ತಾ ಹೋಗುತ್ತಾರೆ ಮತ್ತೆ ಹಲವರು.


                   ಇವನು ತನ್ನ ಪ್ರಯತ್ನಮುಂದುವರಿಸುತ್ತಾ 36 ಗಂಟೆಗಳು ಕಳೆದು ಹೋಗುತ್ತದೆ. ಒಂದು ದೊಡ್ಡ ಕಲ್ಲಿನ ಛಪಡಿಯನ್ನ ಸರಿಸಿದಾಗ ಒಳಗಿನಿಂದ 'ಅಪ್ಪಾ....!', ಎಂಬ ಕೂಗು ಕೇಳಿ ಬರುತ್ತೆ. ತಂದೆ 'ಅರ್ಮಾಂಡ್....' ಎಂದು ಹೆಸರನ್ನು ಕೂಗುತ್ತಾ ಇನ್ನೊಂದು ಕಲ್ಲನ್ನು ಸರಿಸುತ್ತಾನೆ. ಆಗ ಒಳಗೆ ಬೆಳಕು ಬಿದ್ದು ಮಗನ ಮುಖವನ್ನ ನೋಡುತ್ತಾನೆ. 'ಅಪ್ಪಾ.. ನೀ ಬಂದೇ ಬರುತ್ತಿ ಅಂತ ನನಗೆ ಗೊತ್ತಿತ್ತಾಪ್ಪಾ. ನನ್ನವರಿಗೂ ನಾ ಈ ಮಾತನ್ನೇ ಹೇಳುತ್ತಿದ್ದೆ' ಅನ್ನುವ ಮಾತು ಕೇಳಿಬರುತ್ತೆ ಮಗನಿಂದ. 'ಒಳಗೆ ಇನ್ನೂ ಎಷ್ಟುಜನರಿದ್ದಾರೆ?' ಎಂಬ ತಂದೆಯ ಪ್ರಶ್ನೆಗೆ, ಮಗ 'ಮೊದಲು 34 ಜನರಿದ್ದರು, ಈಗ 16 ಜನರಿದ್ದಾರೆ'ಎಂಬ ಮಾತನ್ನು ಹೇಳುತ್ತಾನೆ.'ನಿನ್ನ ಕೈ ಕೊಡು, ಮೇಲಕ್ಕೆ ಎಳೆದು ಕೊಳ್ಳುತ್ತೇನೆ' ಎನ್ನುತ್ತಾನೆ ತಂದೆ. ಮಗ ಹೇಳುತ್ತಾನೆ,'ಅಪ್ಪಾ, ನನಗೋಸ್ಕರ ನೀ ಇದ್ದೀಯಲ್ಲಾ, ಮೊದಲು ಇವರನ್ನು ಮೇಲಕ್ಕೆ ಎಳೆದುಕೊಳ್ಳಪ್ಪಾ..."
                                          
                                           *************************     
   
                 ಕಣ್ಣಿನ ಅಂಚಿಂದ ನೀರು ಜಾರತೊಡಗಿದಂತೆ...... ಮನಸ್ಸಿನಲ್ಲಿನ ಕತ್ತಲೆಯೂ, ಮಂದ ಬೆಳದಿಂಗಳ ನಡುವೆ ಎಲ್ಲಿಯೋ ಓಡಿಹೋದಂತಾಯಿತು.... ಪ್ರೀತಿ.... ನಂಬಿಕೆ....  ನನ್ನಂಗಳದಲ್ಲಿ  ಅಂಕುರಿಸಿದಂತಾಗಿ...  ಅಲ್ಲೇನಿದ್ದೆಗೆ ಜಾರಿಹೋದೆ....                                 ಆ ದಿನ ನನಗೊಂದು ಕನಸಾಯಿತು...... ವಿಶಾಲ ಮರದಕೆಳಗೆ..... ಮಂದಸ್ಮಿತನಾಗಿ, ನಾನು ಕುಳಿತಿದ್ದರೆ... ನನ್ನ ಕುಟುಂಬದ ಕಲರವ, ಪಕ್ಷಿಗಳ ರೂಪದಲ್ಲಿ.... ನನ್ನ ಕಿವಿಗೆ ತಾಕುತಿತ್ತು........
                                          

ಶುಕ್ರವಾರ, ಜುಲೈ 29, 2011

ಮಾಯಾಂಗನೆ....


                   "ನೀ ನಿದ್ದೆ ಮಾಡಿಬಿಟ್ಟರೆ, ನಿನ್ನಜ್ಜ ಬರ್ತಾನಾ ಎಬ್ಬಿಸ್ಲಿಕ್ಕೆ!!?" ಎನ್ನುವ ಮನಸಿನ ಕುಟುಕಿನ ಮಾತಿಗೆ, ನಿದ್ದೆಯಭಾರಕ್ಕೆ ಮುಚ್ಚುತ್ತಿರುವ ಕಣ್ಣನ್ನ ಕಷ್ಟಪಟ್ಟು ತೆರೆದು ಕುಳಿತೆ. ಆದರೂ ಸಹ ಪೂರ್ವಾಭ್ಯಾಸದಂತೆ, ಏರಿಳಿತದ ರಸ್ತೆಯಲ್ಲಿ ಸಾಗುತಿದ್ದ ಬಸ್ಸು ನನಗೆ, ಕಂದನಾಗಿದ್ದಾಗಿನ ಅಮ್ಮ ತೂಗುವ ತೊಟ್ಟಿಲಂತೆ ಭಾಸವಾಗಿ ನಿದ್ದೆ ಒತ್ತರಿಸಿಕೊಂಡು ಬರುತ್ತಲೇ ಇತ್ತು. ಪೂರ್ವಾಭ್ಯಾಸವೆಂದು ನಾನಿಲ್ಲಿ ಯಾಕೆ ಹೇಳುತ್ತಿರುವೆನೇಕೆಂದರೆ, "ಚಿಂತೆಯಿಲ್ಲದಿರುವವನು ಸಂತೆಪೇಟೆಯಲ್ಲೂ ಕೂಡ ಗಡದ್ದಾಗಿ ನಿದ್ದೆ ತೆಗೆಯ ಬಲ್ಲವನಂತೆ!!" ಹ್ಹ.. ಹ್ಹ..! ಹೀಗೆ ಹೇಳುತ್ತಿರುವೆನೆಂದು ನನಗೆ ಚಿಂತೆಯೇ ಇಲ್ಲವೆಂದುಕೊಳ್ಳಬೇಡಿ; ನಿದ್ದೆಗೂ ನನಗೂ... ಯಾವ ಜನುಮದ ನಂಟೋ!? ನಾನೆಲ್ಲಿ ಹೋದರಲ್ಲಿ ನನ್ನೋಟ್ಟಿಗೇ ಗಂಟು ಕಟ್ಟಿಕೊಂಡು ಹೊರಟೇ ಬಿಡುತ್ತದೆ. ಅವಕಾಶ ಸಿಕ್ಕಾಗಲೆಲ್ಲ ತನ್ನ ಗಂಟನ್ನ.. ಚಿಂತೆಯಿರಲಿ, ಏನೇ ಇರಲಿ ಬಿಚ್ಚತೊಡಗಿಬಿಡುತ್ತದೆ. ಹಾಗೆ ಗಂಟುಬಿಚ್ಚುವ ಸ್ಥಳದಲ್ಲಿ ಬಸ್ಸೆಂದರೆ ಪಂಚಪ್ರಾಣ ನಿದ್ದೆಗೆ! "ಸ್ವಾಮೀ....ಈ ಸ್ಟಾಪು ಎಲ್ಲಿ ಬರುತ್ತೆ? ಇನ್ನೂ ಎಷ್ಟು ದೂರವಿದೆ? ತಾವೆಲ್ಲಿ ಇಳಿಯುವವರು?" ಎಂದು ನಾ ಇಳಿಯುವ ಸ್ಟಾಪಿನ ಬಗ್ಗೆ ಪಕ್ಕಕೂತ ಸಹಪ್ರಯಾಣಿಕನಲ್ಲಿ ಕೇಳಿ, ತಿಳಿದುಕೊಂಡು, "ಸ್ವಲ್ಪ, ಆ ಸ್ಟಾಪ್ ಬಂದ ತಕ್ಷಣ ತಿಳಿಸಿ ಬಿಡುತ್ತೀರಾ...??" ಎಂದು ಪಾಪದ ಮುಖಮಾಡಿಕೊಂಡು ಕೇಳಿದ ತಕ್ಷಣ, ತನ್ನ ಮೇಲೆ ಬಿದ್ದ ಹೊಸ ಜವಾಬ್ದಾರಿಗೆ ಬದ್ಧನಾಗಿ, ಕತ್ತನ್ನ ಉದ್ದಗೊಳಿಸುತ್ತಾ ಆಗಾಗ ನೋಡುವ ಹೊಸ ಸ್ನೇಹಿತನನ್ನ ನೋಡುತ್ತಾ, ಮನಸ್ಸಿನಲ್ಲೇ ನಕ್ಕು, ಮೆಚ್ಚಿಕೊಳ್ಳುತ್ತಾ, ನಾನು ಮಾತ್ರಾ ನಿದ್ದೆಯ ಗಂಟಿನೊಳಗೆ ಹುದುಗಿಕೊಂಡುಬಿಡುತಿದ್ದೆ! ಕೆಲವೊಮ್ಮೆ ಇದಕ್ಕೆ ವ್ಯತಿರೇಕವೂ ಕೂಡ ಆಗಿದ್ದಿದೆ! ಗಂಟು ಮುಖದವ ಬಂದು ಕುಳಿತರೆ, ಅವನಿಂದ "ಗೊತ್ತಿಲ್ಲಾರೀ..." ಎನ್ನುವ ಒಣಮಾತಿನಿಂದ, ಅವನ ಮೇಲೆ, "ನನ್ನ ನಿದ್ದೆಗೆ ಭಂಗತಂದ ಕಾರಣದಿಂದ ಅವನಿಗೆ ನರಕಕ್ಕೇ ಹೋಗುವ ಸ್ಥಿತಿ ಬಂತಲ್ಲ....!" ಎಂದು  ನೊಂದುಕೊಳ್ಳುವ ಪರಿಸ್ಥಿತಿ ನನ್ನದಾಗುತಿತ್ತು! ಏನಿದ್ದರೂ..ಪರೋಪಕಾರಿಗಳೇ ತುಂಬಿಕೊಂಡಿರುವ ನಮ್ಮಲ್ಲಿ, ನೂರಕ್ಕೆ ಹತ್ತರಷ್ಟು ಮಾತ್ರ ಅಂತವರಿಂದ ನನಗೀ ಅನುಭವವಾಗಿರೋದು. ಆದ್ರಿಂದ ನನ್ನದ್ಯಾವಾಗಲೂ ಸುಖಪ್ರಯಾಣವೇ!!
                            
                                
                        ಆದರೆ, ಈ ದಿನ ಮಾತ್ರ ನನಗೆ ಆ ಸೌಭಾಗ್ಯವಿಲ್ಲವೆನಿಸಿ, ಪಕ್ಕದ ಸೀಟು ಖಾಲಿಯಿಂದ ನನ್ನ ಅಣುಕಿಸುತಿದ್ದರೆ, ನಿದ್ದೆ ಮಾತ್ರ ತನ್ನಗಂಟನ್ನ ಬಿಚ್ಚಲು ಹಾತೊರೆಯುತಿತ್ತು!  ಪುನಃ ಕಣ್ಣನ್ನ ಗಟ್ಟಿಯಾಗೊಮ್ಮೆ ಉಜ್ಜಿ, ಸಂಪೂರ್ಣವಾಗಿ ತೆರೆದು ಪುನಃ ಕುಳಿತೆ, ಬಸ್ಸಿನಲ್ಲಿ ಹೆಚ್ಚು ಜನರಿದ್ದಂಗಿರಲಿಲ್ಲ. ಕಂಡೆಕ್ಟರ್ ಸಾಹೇಬ ಡ್ರೈವರ್ ಹತ್ತಿರ ಏನೋ ಹರಟುತಿದ್ದ. ಏನು ಮಾತನಾಡುತ್ತಿರ ಬಹುದೆಂದು ಆಲಿಸಲು ಪ್ರಯತ್ನಿಸಿದೆ, ನಡುವೆ ಮೂರು ಸೀಟುಗಳ ಅಂತರವಿದ್ದು ದೂರವಾದ್ದರಿಂದ, ಬಸ್ಸಿನ ಧ್ವನಿಯೂ ಕೂಡ ಅವರ ಮಾತಿನಲ್ಲಿಯೇ ಬೆರೆತು ಹೋದದ್ದರಿಂದ, ಅವರು ಮಾತನಾಡುವಿಕೆ ಕೇವಲ ಅಸ್ಪಷ್ಟ ಧ್ವನಿಯಾಗಿ ಮಾತ್ರವೇ ಕಿವಿಗೆ ಬಂದು ಬಡಿಯುತಿತ್ತು. ಅದರಲ್ಲಿ ಸೋತು ಪಕ್ಕದ ಸೀಟುಗಳಲ್ಲಿ ತಿರುಗಿಸಿದೆ. ಸುಮಾರು ಐದು ವರ್ಷದ ಹುಡುಗ, ಬಸ್ಸು ಮುಂದೆ-ಮುಂದೆ ಹೋಗುತ್ತಿರುವುದರಿಂದ, ಹಿಂದೆ-ಹಿಂದೆ ಓಡುತ್ತಿರುವ ಮರ-ಗಿಡಗಳನ್ನು ನೋಡುವ ಕುತೂಹಲಕ್ಕೆ ತಲೆಯನ್ನು ಹೊರಹಾಕಿ ನೋಡಲು ಪ್ರಯತ್ನಿಸುತಿದ್ದರೆ, ಅವನ ತಾಯಿ, ಅವನನ್ನ ಎಳೆದು ಕುಕ್ಕರಿಸುತಿದ್ದಳು. ಹಾಗೆಯೇ ಕುಳಿತ ಅವನು "ನಾಯಿ ಬಾಲ ಡೊಂಕೇ" ಎನ್ನುವಂತೆ,  ಪುನಃ ತಲೆ ನಿಧಾನವಾಗಿ ಹೊರನಡೆದು ಬಿಡುತಿತ್ತು! ಹೀಗೆ ಅವನನ್ನ ಕುಳ್ಳರಿಸಲು ಪಾಡುಪಡುತಿದ್ದಳವಳು!! ಅವರ ಮುಂದಿನ ಸೀಟಿನಲ್ಲಿ ಮುದಿ ದಂಪತಿಗಳು ಕುಳಿತಿದ್ದರಷ್ಟೇ! ಮತ್ತೆ ಅಂತಹ ವಿಶೇಷತೆಯೇನೂ ಕಂಡು ಬರದೇ, ಬೇಸರದಿಂದೆಂಬಂತೆ ಜೋಲಿಹೊಡೆಯುತ್ತಿದ್ದ ಬಸ್ಸಿನ ಕಿಟಕಿಯಿಂದ, ದೂರಕ್ಕೆ ಕಣ್ಣಾಡಿಸತೊಡಗಿದೆ.....
                                        ದೂರದಲ್ಲಿ ಹಸಿರು ಬೆಟ್ಟವೊಂದು ನಮ್ಮ ಬಸ್ಸಿಗೇ ರೇಸು ಕೊಡುವಂತೆ ನಮ್ಮ ಜೊತೆನೇ ಓಡಿ-ಓಡಿ ಬರುತ್ತಿರುವಂತೆ ಭಾಸವಾಗುತಿತ್ತು. ಅದರ ಬುಡದಲ್ಲಿನ ತಿಳಿಹಸಿರಿನ ಗದ್ದೆಗಳು ಸಾಲುಗಟ್ಟಿ ನಿಂತಿದ್ದವು. ಅಲ್ಲಲ್ಲಿ ಪುಟ್ಟ-ಪುಟ್ಟ ಕೆರೆಗಳು... ಕೆಂಪು-ಕೆಂಪು ಹೆಂಚಿನ ಮನೆಗಳು.... ಕಲಾವಿದನ ಕುಂಚದಿಂದ ಜಾರಿದ ನೀರು, ಬಣ್ಣದ ಹನಿಗಳಂತೆ ಕಂಡುಬರುತಿತ್ತು. ಈ ರೀತಿಯಾಗಿ ನನ್ನ ಕಣ್ಣಿಗೆ ಕಂಡದ್ದನ್ನ ಕಲ್ಪಿಸುತಿತ್ತದ್ದಂತೆ, ನಿದ್ದೆಯೂ ತನ್ನ ನೆರಳನ್ನ ಹರಡಲು ಶುರುಮಾಡಿತು. ಪುನ: ತಲೆಯನ್ನು ಕುಡುಗಿ, ಸೀಟಿನ ಮೆದು ದಿಂಬಿಗೆ ತಲೆ ಇಟ್ಟು, ಹಸಿರು ಬೆಟ್ಟವನ್ನೇ ನೋಡತೊಡಗಿದೆ. ಆ ಸಂದರ್ಭದಲ್ಲಿಯೇ ನನ್ನನ್ನ ಅನಾಲೋಚಿತವಾಗಿ ಆ ಬೆಟ್ಟದ ತುದಿ ಆಕರ್ಷಿಸಿತಲ್ಲದೇ, ಆಶ್ಚರ್ಯಚಕಿತನನ್ನಾಗಿಸಿತೂ ಕೂಡ..!!
                                  ಸುತ್ತಲೂ ಕರಿ ಮೋಡ ತುಂಬಿ ಕೊಂಡಿದ್ದರೆ, ಅಲ್ಲೊಂದು ಬೆಳ್ಳಗಿನ ಮೋಡವೊಂದು ಬೆಟ್ಟದ ತುದಿಯಲಿ ತಾಗಿ ನಿಂತಿತ್ತು. ಅದರಿಂದ ಹೊರಸೂಸುತ್ತಿರುವ ಪ್ರಕಾಶವೂ ಸುತ್ತಲೂ ಹರಡಿ, ಏನೋ ಒಂದು ರೀತಿಯ ಆಹ್ಲಾದತೆಯನ್ನ ಉಂಟು ಮಾಡುವಂತೆ ಕಾಣುತಿತ್ತು. ಆ ಮೋಡದ ಮೈ ಶಿಲ್ಪಿಯಿಂದ ನಾಜೂಕಾಗಿ ಕೆತ್ತಲ್ಪಟ್ಟ ಅಮೃತ ಶಿಲೆಯಂತೆ ತೋರುತಿತ್ತು. ನನ್ನ ದೃಷ್ಟಿ ತದೇಕವಾಗಿ ಆ ಮೋಡದಲ್ಲೇ ಏಕೀಕರಣಗೊಂಡಾಗ ಅಲ್ಲೊಂದು ಸುಂದರ ವದನ ಕಂಡು ಹೌ-ಹಾರಿಹೋದೆ!!   ಮತ್ತೂ ಸ್ಪಷ್ಟವಾಗಿ ನೋಡಿದಾಗ ಅಸ್ಪಷ್ಟವಾದ ಮಾನವರ ಆಕಾರ ಕಾಣತೊಡಗಿತು. "ಹೌದು, ಅಲ್ಲಿ ಇರುವುದು ಮೋಡವಲ್ಲ!! ನಿಜವಾಗಲೂ ಅಲ್ಲಿ ಇರುವುದು ಮೋಡವಲ್ಲ.... ಯಾವುದೋ ದೇವಕನ್ಯೆಯಂತೆ ತೋರುವ ಒಂದು ಸ್ತ್ರೀ ಆಕಾರ.... ಅಲ್ಲ.. ಅಲ್ಲ.. ಅದು ದೇವಕನ್ಯೆಯೇ ಇರಬೇಕು.... ಇಲ್ಲದೇ ಹೋದರೆ ಅಷ್ಟು ದೂರದ ಬೆಟ್ಟದ ತುದಿಯಲಿ ಅವಳು ಹೇಗೆ ನನ್ನ ಕಣ್ಣಿಗೆ ಸ್ಪಷ್ಟವಾಗಿ ತೋರಬೇಕು ಹೇಳಿ?? ಹೌದು, ಅವಳು ದೇವಕನ್ಯೆಯೇ!"  ಆಶ್ಚರ್ಯದಿಂದ ಮತ್ತೊಮ್ಮೆ, ಮಗದೊಮ್ಮೆ ಅವಳಲ್ಲಿಯೇ ನೋಡುತ್ತಿದ್ದು ಬಿಟ್ಟೆ... ಇವಾಗ ಅವಳು ಮತ್ತೂ ಸ್ಪಷ್ಟವಾದಳು. ನನ್ನ ಆನಂದ ಹೇಳ ತೀರದು! "ದೇವಕನ್ಯೆಯೇ ನನ್ನ ಕಣ್ಣಿಗೆ ಕಾಣುತಿದ್ದಾಳೆ.... ! ಯಾವ ಲೋಕದವಳಾಗಿರಬಹುದು? ಹೇಗೆ ಬಂದಿಹಳಿಲ್ಲಿ? ಇಲ್ಲೇನು ಮಾಡುತ್ತಿರಬಹುದಿವಳು? ಯಾರಿಗಾದರೂ ಕಾದಿಹಳೇ?....." ಹೀಗೆ ಅನೇಕ ಪ್ರಶ್ನೆಗಳ ಸರಮಾಲೆಯೇ ನನ್ನೀ ಮನದಂಗಳದಲ್ಲಿ ಅಂಕುರಿಸತೊಡಗಿದವು.....
                   ಅವಳಿಂದ ನನ್ನೀ ಕಣ್ಣನ್ನ ಬೇರೆ ಮಾಡಲು ಸಾಧ್ಯವಾಗುತ್ತಲೇ ಇಲ್ಲ ನನಗೀಗ.. ನಾನೆಲ್ಲಿ ಕುಳಿತಿರುವೆನೆಂಬುದೇ ನನಗೆ ನೆನಪಾಗುತ್ತಿಲ್ಲ... ಮನದ ತುಂಬಾ ಆ ರೂಪವೇ.... ಅವಳಿಂದ ಸೂಸುತ್ತಿರುವ ಸುಗಂಧ ನನ್ನನ್ನ ಮತ್ತೂ ಅವಳೆಡೆಗೇ ಎಳೆದೊಯ್ದಿತು... ಅವಳ ರೂಪವನ್ನೇ ನೋಡಿ ನಾನಿಷ್ಟರವರೆಗೆ ಓದಿದ, ಕೇಳಿದ ಪದಗಳ ಸಾಲುಗಳಲಿ ಯಾವ ಪದಗಳೂ ಕೂಡ ಸರಿಸಾಟಿಯಾಗದಾದವು.... ಬ್ರಹ್ಮ ಇವಳನ್ನ ಪುರುಸೊತ್ತು ಮಾಡಿಕೊಂಡು ಸೃಷ್ಟಿಸಿದ್ದಲ್ಲ!!! ಬಹುಶಃ ಇವಳನ್ನ ಸೃಷ್ಟಿಸಲು ಇಷ್ಟುಕಾಲವೇ ಹಿಡಿದಿರಬೇಕೆನಿಸತೊಡಗಿತು.. ಅವಳನ್ನ ಈ ಕಣ್ಣುಗಳಲಿ ಆನಂದಿಸಲು ಎಲ್ಲಿಂದ ಪ್ರಾರಂಭಿಸಲಿ ಎನ್ನುವುದೇ  ತೋಚದಾಯಿತು... ಬೆಳ್ಳಗಿನ ಪಾದ... ಆ ಪಾದವನ್ನ ಬೀಸುತ್ತಿರುವ ಗಾಳಿಯಿಂದ ಆಗಾಗ ಮುಚ್ಚಲ್ಪಡುತ್ತಿರುವ ಅವಳುಟ್ಟ ಸೀರೆಯ ಅಂಚು, ಅವಳ ಶ್ವೇತವರ್ಣದ ಶರೀರಕ್ಕೇ ಪೈಪೋಟಿ ನೀಡುತ್ತಿರುವಂತಿರುವ ಅವಳುಟ್ಟ ತೆಳು ನೀಲಿ-ಬಿಳಿಬಣ್ಣದ ಸೀರೆ... ಆ ಸೀರೆಯ ಅಂಚಿಂದ ಬೀರುತ್ತಿರುವಂತಿರುವ ಹೊಂಬಣ್ಣ.... ಆ ಸೀರೆಗಳಲಿ ನಕ್ಷತ್ರಗಳೇ ಬಂದು ಕುಳಿತುಕೊಂಡಿದ್ದವೇನೋ.... ಅಂತಹ ಶೋಭೆಯನ್ನೇ ನೀಡುತ್ತಿರುವಂತಹ ಚಿತ್ತಾರಗಳು.. ತುಸು ಬಾಗಿ ನಿಂತ ಅವಳ ಎಡಗೈಯ ಮಣಿಗಂಟಿನತ್ತ ಜಾರಿದ ಬಳೆಗಳು.. ಆ ಕೈ ಲಿ ಹಿಡಿದಿರುವ ಹೂ ಗೊಂಚಲು... ಯಾವ ಲೋಕದಲ್ಲಿ ಕಿತ್ತುತಂದಿದ್ದೋ ಏನೋ?? ಯಾರಿಗೆ ಸಮರ್ಪಿಸಲೋ ಏನೋ?? ಅವಳು ನಿಂತ ಭಂಗಿಯಿಂದಲೇ, ಮತ್ತೂ ಆಕರ್ಶಿಸಲ್ಪಡುತ್ತಿರುವ ಅವಳ ಅಂಗ-ಸೌಷ್ಟವಗಳೂ... ಗಾಳಿಯ ವೇಗಕ್ಕೆ ಹಿಂದೆ ಹಾರಾಡುತ್ತಿರುವ ಸೀರೆಯ ಸೆರಗಿಗೆ.... ಪೈಪೋಟಿ ನೀಡುತ್ತಿರುವಂತಹ ಬೆನ್ನಿನ ಮೇಲೆ ಹರಡಿನಿಂತು ಹಾರಾಡುತ್ತಿರುವ ಆ ಕೊಂಚ, ಕೆಂಪು ಮಿಶ್ರಿತ ಕಪ್ಪು ಕೂದಲುಗಳು....  ಹಿಮದ ಬಿಂದುಗಳಿಂದ ನಿರ್ಮಿಸಲ್ಪಟ್ಟಂತಿರುವ ಧರಿಸಿದ ಮುತ್ತಿನ ಮಾಲೆಯಿಂದ ಶೋಭಿಸುತ್ತಿರುವ ಆ ಕತ್ತಿನ ಪ್ರದೇಶವೂ...ಇನ್ನು ಆ ತುಟಿಯ ನಡುವೆ ಮಿನುಗುತ್ತಿರುವ ಮಂದಹಾಸ.. ಆ ಮೂಗು.. ಆ ಕೆನ್ನೆ.... ಇಲ್ಲ ನನ್ನಿಂದ ಹೇಳಲಾಗುತ್ತಿಲ್ಲ.... "ಓ ದೇವ... ಯಾಕೆ ನೀನು ಅವಳನ್ನು ಬಿಂಬಿಸಲು ಶಬ್ದಗಳನ್ನೇ ಸೃಷ್ಟಿಸಲಿಲ್ಲ!!??? "  ಮತ್ತೆ... ವಿಶಾಲವಾದ ಹಣೆ, ಆ ಹಣೆಯ ಕೆಳಗೆ ಕಾಮನ ಬಿಲ್ಲಿನಂತೆ ಬಾಗಿದ ಹುಬ್ಬುಗಳು..... ಆ ಹುಬ್ಬುಗಳ ಕೆಳಗೆ.... ಆ ಕಣ್ಣುಗಳು.... ಆ ಕಣ್ಣುಗಳು!!! ನನ್ನೇ ನೋಡುತ್ತಿವೆ... ಹೌದು.. ಹೌದು.. ಅವು ನನ್ನೇ ನೋಡುತ್ತಿವೆ.... ಹೂ-ಗೊಂಚಲು ಹಿಡಿದಿರುವ ಕೈ ಮೇಲೇತ್ತಿ ನನ್ನ ಕಡೆಗೇ ಬರುತ್ತಿದೆ..... ನನ್ನಿಂದ ನಂಬಲಾಗುತ್ತಿಲ್ಲ!! ಆ ಹೂಗಳು ನನಗೆಂದೇ... !! ನನ್ನ ಕೈ ಕೂಡ ಅನಾಯಾಸವಾಗಿ ಮೇಲೆದ್ದಿತು.. ಗಾಳಿಯಲ್ಲೇ ತೇಲಾಡುತ್ತಿರುವಂತಹ ಅನುಭವ..ಇಲ್ಲ ಇಲ್ಲ... ನನಗಾಗುತ್ತಿರುವ ಆನಂದವನ್ನ ತಡೆಯಾಲಾಗುತ್ತಿಲ್ಲ.... ಇದು ಕನಸಲ್ಲ...ತಾ....!! "ಅಮ್ಮಾ.....!!!" ಬಾಯಿಯಿಂದ  ಅನೌಚಿತವಾಗಿ ಹೊರಬಂದ ಶಬ್ದದಿಂದ ಕಣ್ಣುತೆರೆದು ಕುಳಿತೆ!! ಒಮ್ಮೆಗೇ.... ಏನಾಯಿತು ಅನ್ನುವುದೇ ಬುದ್ಧಿಯ ಪಟಲದಲ್ಲಿ ತೋಚದಂತಾಯಿತು!! "ಅಮ್ಮಾ.." ಅಂದಿದ್ದು ಯಾಕೆಂದು ಉಬ್ಬಿನಿಂತ ಹಣೆಯ  ಬಲಪಕ್ಕದಲ್ಲಿ  ಉಂಟಾಗುತ್ತಿರುವ ನೋವು ತಿಳಿಸುತಿತ್ತು! ಆ ನೋವು ಯಾಕಾಯಿತೆಂದು, ಕಿಟಕಿಯಿಂದ ತಲೆ ಹೊರಹಾಕಿ, ಕೆಳನಿಂತ ಯಾರೊಂದಿಗೋ  ಕೂಗಾಡುತ್ತಿರುವ ಡ್ರೈವರ್ ನಿಂದ ತಿಳಿಯಲ್ಪಟ್ಟಿತು! ತಕ್ಷಣ ನಾ ವಾಸ್ತವಕ್ಕೆ ಬಂದು, ಎದ್ದುನಿಂತು ಕಂಡಕ್ಟರ್ ನಲ್ಲಿ ಕೇಳಿದೆ, " ಸಾರ್... ನಾ ಇಳ್ಯೋ ಸ್ಟಾಪ್..........??? " ಆ ಸ್ಟಾಪ್ ಆ..... ಅದಾಗ್ಲೆ ಕಳ್ದು ತಾಸ್ ಆಯ್ತಲ್ರೀ.... ಏನ್ ಮಾಡ್ತಿದ್ರಿ ಇಷ್ಟೊತ್ತು??? ಇಳ್ಳಿರ್ರೀ.. ಇಳ್ಳಿರ್ರೀ....ಬರ್ತಾರ್ರೆ... ನಮ್ ಪ್ರಾಣ ತಿನ್ನೋಕೆ.... ಯಾವ್ದಾದ್ರೂ ಹಿಂದೆ ಹೋಗುವ ಗಾಡಿ ಬಂದ್ರೆ ಹತ್ತು ....... " ಕಂಡಕ್ಟರ್ ಸಾಹೇಬ್ರ ಬಾಯಿಂದ ಮಾತುಗಳು ಬರುತ್ತಿದ್ದವು, ಅದನ್ನ ಕೇಳುವ ವ್ಯವಧಾನ ನನಗಿರಲಿಲ್ಲ.... ಬ್ಯಾಗನ್ನ ತಗೊಂಡು ಬಸ್ಸಿನಿಂದ ಇಳಿದು ನಿಂತೆ....!!!
                                         ಗೊರ್ರರ್... ಎಂದು ಧ್ವನಿ ಮಾಡುತ್ತ.... ನನ್ನೆದುರಿಂದ ಬಸ್ಸು ಮುಂದೆ ತೆರಳಿತು.... "ಏನಪ್ಪ ಗ್ರಾಚಾರ... ನಂದು, ಇನ್ಹೇಗೆ ನನ್ನ ಗಮ್ಯಸೇರುವುದಪ್ಪಾ???" ಎಂದು ಮನಸ್ಸಿನಲ್ಲೇ ಹಳಿಯುತ್ತಾ... ಬೆಟ್ಟವಿದ್ದಕಡೆ ದೃಷ್ಟಿಹಾಯ್ಸಿದರೆ.......ಅಲ್ಲಿ ದೇವಕನ್ಯೆಯೂ ಇರಲಿಲ್ಲ, ಬೆಟ್ಟವೂ ಇರಲಿಲ್ಲ..... ಬದಲಿಗೆ ಕರ್ರಗಿನ ಶರೀರಹೊತ್ತ... ರಕ್ಕಸನಂತಿರುವ.. ಕಾರ್ಮೋಡವೊಂದು, ನುಂಗುವಂತೆ.... ಕೆಕ್ಕರಿಸಿಕೊಂಡು ಒಂಟಿಯಾಗಿ ರಸ್ತೆಯ ಅಂಚಿಗೆ ನಿಂತ ನನ್ನನ್ನೇ ನೋಡುತಿತ್ತು.....!!!!