ಶನಿವಾರ, ಸೆಪ್ಟೆಂಬರ್ 10, 2011

ಮಾಯಾಂಗನೆ- ೨, ನೆನಪಿನ ಗಂಟಿನ ಬುತ್ತಿಯ ಬಿಚ್ಚುತ್ತಾ.........

              ನಡೆದಾಡುತ್ತಿರುವ, ಓಡುತ್ತಿರುವ ಉಳಿದವರನ್ನು ಭಾವ ತುಂಬಿದ ಕಣ್ಣುಗಳಿಂದ ನೋಡುತ್ತಾ, ತುಮುಲತೆಯಿಂದ ಕೂಡಿದ ಮನಸ್ಸಿನಿಂದ "ತಾನ್ಯಾವಾಗ ಆ ರೀತಿ ವಿಹರಿಸ ಬಲ್ಲೆ??" ಎನ್ನುವ ಪ್ರಶ್ನೆಯನ್ನ ತನ್ನಲ್ಲೇ ಕೇಳಿಕೊಳ್ಳುತ್ತಾ, ನಿಧಾನವಾಗಿ ಅಂಬೆಗಾಲಿಕ್ಕುತ್ತಾ.... ಆಸರೆಯನ್ನ ಹಿಡಿದು ಕಷ್ಟಪಟ್ಟು ಎದ್ದುನಿಂತು ಮೊದಲನೆಯ ಹೆಜ್ಜೆಯನ್ನ  ಇಟ್ಟು, ನಾಲ್ಕು ಹೆಜ್ಜೆಯನ್ನ.... ಹಾಕಿ, ಸುತ್ತಲೂ ಒಮ್ಮೆ ಭಯದಿಂದ ಕಣ್ಣನ್ನಾಡಿಸಿತು ಮಗು....!! ತಾನು ಹಿಡಿದುಕೊಂಡು ನಿಂತ ಆಸರೆ ದೂರ ನಿಂತಿದೆ...! ಕೈ ಆಡಿಸಿದರೆ ಏನೂ ಸಿಗಲೊಲ್ಲದು...!! ಗಾಭರಿಯುಂಟಾಗಿ ಅಳು ತನ್ನ ಜಾಗವನ್ನ ಖಾಯಂ ಆಗಿ ಆಕ್ರಮಿಸಲು  ಹವಣಿಸುತ್ತಿರುವಂತೆ...... ಕರತಾಡನದ ಜೊತೆಗೆ, ಹುರಿದುಂಭಿಸುವ ನಗು ಸುತ್ತಲಿನಿಂದ ಮಗುವಿನ ಕಿವಿಗಪ್ಪಳಿಸತೊಡಗಿತು..! ಕೇಕೆಯ... ನಗುವನ್ನ ತನ್ನಮುದ್ದು ಮುಖದಲ್ಲಿ ತಂದುಕೊಂಡು...... ತನ್ನನ್ನು ಬಾಚಿ ತಬ್ಬಿಕೊಳ್ಳಲು, ಕೈ ಮುಂದು ಮಾಡಿಕೊಂಡಿರುವ ಅಮ್ಮನ ಮಡಿಲನ್ನ ಸೇರುವ ಉತ್ಸಾಹದಿಂದ ತನ್ನ ಮತ್ತೊಂದು ಹೆಜ್ಜೆಯನ್ನ ಇಟ್ಟಿಯೇ ಬಿಟ್ಟಿತು.....! "ತಾನೂ ಓಡಾಡ ಬಲ್ಲೆ, ಓಡ ಬಲ್ಲೆ... ಇನ್ನು ಮುಂದೆ ಜಿಗಿದು, ಕುಪ್ಪಳಿಸಲೂ ಬಲ್ಲೆ..." ಎನ್ನುವ ಭಾವ ಅದರ ಮನದ ತುಂಬಾ ತುಳುಕಾಡುತಿತ್ತು........

ಬಸ್ಸು, ಗಮ್ಯ, ನಾನು, ಸೀಟು, ಮಾಯಾಂಗನೆ........................
                 ಎಲ್ಲಾ ಬಸ್ಸುಗಳನ್ನೂ ಹೆಚ್ಚು-ಕಮ್ಮಿ ಒಂದೇ ಮೆಟಲ್ ನಿಂದ ತಯಾರಿಸಿರ ಬಹುದು. ಆದರೆ ಪ್ರತಿ ಬಸ್ಸಿಗಿರುವ ಬೋರ್ಡುಗಳು ಇರುವುದು ಬೇರೆ-ಬೇರೆನೇ! ಸೇರುವ "ಗಮ್ಯ"ವೂ ಕೂಡ ಬೋರ್ಡಿಗೆ ತಕ್ಕಂತೆ.
               ಮನುಷ್ಯನಂತೆ!!! ಎಲ್ಲರೂ ಪಂಚಭೂತಗಳಿಂದಲೇ ನಿರ್ಮಿಸಲ್ಪಟ್ಟವರೇ...! ಆದರೆ ಆಕಾರ, ವಿಕಾರ, ವಿಹಾರ, ಮನೋವ್ಯಾಪಾರ.... ಎಲ್ಲವೂ ಬೇರೆ ಬೇರೆಯಾದಂತೇ! ಅವರ ಹಣೇಬರಹಕ್ಕೆ ತಕ್ಕಂತೆ! ಅದು ನಮ್ಮವುಗಳ ಕರ್ಮವಂತೆ!! ಹಾಗಿದ್ದರೆ ಹಣೆಬರಹ-ಬೋರ್ಡು ಎರಡೂ ಒಂದೇ ಇದ್ದಂತೆ ಆಯಿತಲ್ಲವೇ?? ಇಷ್ಟವೋ-ಕಷ್ಟವೋ...... ಬೋರ್ಡಿನಲ್ಲಿದ್ದ (ಹಣೆಬರಹದ) ಕಡೆ ಸಾಗಲೇ ಬೇಕಂತಾಯಿತು!! ಹಾಗೇ ಬೋರ್ಡನ್ನು ಹಾಕಿಕೊಂಡು, ಬೋರ್ಡಿನಲ್ಲಿರುವ ಗಮ್ಯದತ್ತ ಸಾಗುತ್ತಿರುವ ಬಸ್ಸು... ಬಸ್ಸಿನಲ್ಲಿ "ನಾನು......."

                    ನಾನು..... ಅದೇ ನಾನು.. "ಪ್ರಥಮ ಚುಂಬನಂ ದಂತ ಭಗ್ನಂ" ಎನ್ನುವಂತೆ ಮೊದಲು ನಡೆದ, ಆವತ್ತಿನ ಮಾಯಾಂಗನೆಯ ಪ್ರಹಸನ ನನ್ನನ್ನ ತೀರಾ ಅವಮಾನಕ್ಕೀಡು ಮಾಡಿದ್ದರಿಂದ, ನನ್ನ ಮನಸ್ಸಿನ ಕೆಲವೊಂದು ವ್ಯಾಪಾರಗಳಿಗೆ ಕಡಿವಾಣ ಹಾಕಲೇ ಬೇಕಿತ್ತು!! ಅದು ಅನಿವಾರ್ಯವೂ ಹೌದಾಗಿತ್ತು!! ಆದರೆ ಯೇನಂದುಕೊಂಡರೆ ಯೇನು ಬಂತು??? ಪರಿಸರ ನಮ್ಮನ್ನ ಬಿಡಬೇಕಲ್ಲ!! ನಾನು ಕುಳಿತ ಬಸ್ಸಿನ ಪರಿಸರವೇ ಅದಾಗಿತ್ತು!! ಅದ್ಯಾಕೆ ಅಂತ ಕೇಳ್ತಿದೀರಾ??? ನಾನು ಕುಳಿತಿದ್ದು "ಮಾಯಾಂಗನೆ"ಯರಿಗಾಗಿಯೇ ಮೀಸಲಿಟ್ಟ "ಸೀಟು"ಗಳಲ್ಲಿ!!!!

                 ನಾನು ಹತ್ತಿದ ಸಂದರ್ಭವೇ ಹಾಗಿತ್ತು. ಹಿಂದಿನ ಸೀಟುಗಳೆಲ್ಲಾ ತುಂಬಿಕೊಂಡಿದ್ದವು. ಆದರೆ, ಮುಂದೆ ಇರುವ "ಸ್ತ್ರೀಯರಿಗಾಗಿ" ಎಂದು ಶಿರೋನಾಮವುಳ್ಳ ಸೀಟುಗಳು...ಮಾತ್ರಾ ತನ್ನ ಸೆರಗನ್ನ ಹಾಸಿ ನನ್ನ ಕುಳಿತುಕೊಳ್ಳಲು ಪ್ರೇರೆಪಿಸುವಂತೆ ಖಾಲಿಯಾಗಿದ್ದವು!! "ಹುಚ್ಚರ ಮದುವೇಲಿ ಉಂಡೋನೆ ಜಾಣ" ಎನ್ನುವಂತೆ ಹಾಗೆ ಕರೆದು ಆಹ್ವಾನಿಸುತ್ತಿರುವ ಅವುಗಳ ಪ್ರೀತಿಯ ಕರೆಗೆ ಓ... ಗುಟ್ಟಿ, ಹೋಗಿ ಆಸೀನನಾಗಿಯೇ ಬಿಟ್ಟೆ!
               ಆ ಸಮಯದಲ್ಲಿಯೇ, ಈ ಸೀಟಿನಲ್ಲಿ ಕುಳಿತುಕೊಳ್ಳಲು ಖಂಡಿತಾ ಗಂಡೆದೆ ಬೇಕೆ-ಬೇಕು ಎಂದು ಅನ್ನಿಸಿದ್ದು ನಿಜವೇ!! ಯಾಕೆಂದರೆ "ಇಲ್ಯಾಕ್ರಿ ಕುತ್ಗೋಂಡಿದೀರಾ??? ಹಿಂದೋಗಿ ನಿಂತ್ಗೋಳ್ರೀ" ಎಂದು ಎಬ್ಬಿಸಿ ಓಡಿಸುವ ಕಂಡಕ್ಟರ್, "ಹಯ್ಯೋ... ಖಾಲಿಯಾದ ಸೀಟು, ನಮಗೆ ಕುಳಿತುಕೊಳ್ಳಲಿಲ್ಲವಲ್ಲ" ಎಂದು  ಬಸ್ಸಿನ ಕಂಬಿಗೆ ಜೋತು ಬೀಳುವ ಶರೀರಕ್ಕೆ, ಸವಾಲೆಸೆಯುವಂತೆ ತಾನೇನು ಕಮ್ಮಿ ಇಲ್ಲ ಎಂದು, ಧೈರ್ಯವಿಲ್ಲದೇ ಅಲ್ಲಿ ಕುಳಿತುಕೊಂಡಿರುವವರನ್ನ ನೋಡಿ ಜೋಲು.... ಹಾಕುವ ಸಹಪ್ರಯಾಣಿಕರ ಮುಖಭಾವಗಳೂ,  ಲೇಡಿಸ್ ಮಣಿಗಳು ಬಂದಾಗ, ಅಲ್ಲೇ ಪಕ್ಕದಲ್ಲಿ ನಿಂತ ಸ್ವಜಾತಿಯವರು "ಇವ್ನೇನು..! ದೊಡ್ಡದಾಗಿ  ಇಲ್ಲಿ ಕುತ್ಗೋಂಡಿದಾನೆ" ಎಂದು ಅಸೂಯೆಯೋ ಅಥವಾ    ಅವರ ಎದುರಿಗೆ ಫೋಸು ಕೊಡಲೋ.... ಕುಳಿತವರನ್ನ ಎಬ್ಬಿಸಲು ನಡೆಯುವ ಪೈಪೋಟಿಗಳಿಂದ ನಡೆಯುವ ಅವಾಂತರಗಳೂ, "ಹೆ ಹೆ ಹೆ! ಅವನನ್ನ ನೋಡು, ಲೇಡಿಸ್... ಸೀಟಿನಲ್ಲಿ ಹೋಗಿ ಕೂತಿದ್ದಾನೆ!! ಹೆಂಗಸ್ರಂತವ್ನು" ಎಂದು ಕಿವಿಗಪ್ಪಳಿಸುವ ಪೋಲಿ ಮಾತುಗಳೂ, ಈ ಸೀಟಿನಲ್ಲಿ ಕುಳಿತಿದ್ದರಿಂದ, ಇವನು ಸ್ತ್ರೀ ವಿರೋಧೀ ಚಟುವಟಿಕೆಯಲ್ಲಿ ತೊಡಗಿಕೊಂಡಿರಬೇಕು.. ಎಂಬ ಗುಮಾನಿ... ನಮ್ಮ ಮಾಯಾಂಗನೆಯರ ಮನದಲ್ಲೂ ಕೆಲವೊಮ್ಮೆ ಮೂಢಿಬಂದು....ನಡೆಯುವ ಆಮೇಲಿನ ಚಳುವಳಿ..  ಇತ್ಯಾದಿ ಇತ್ಯಾದಿ......... ನನಗೆ ಗೊತ್ತಿಲ್ಲದ್ದೇನಲ್ಲ!! ಬಂದದ್ದು ಬರಲಿ... ಎಂದು ಗಟ್ಟಿ ಮನಸ್ಸು ಮಾಡಿ ಕುಳಿತೇ ಕೊಂಡಿದ್ದೆ!!
                  ನಾನು ಯೋಚಿಸಿದಂತೆ ಸದ್ಯದಲ್ಲಿ ಏನೂ ನಡೆದಿರಲಿಲ್ಲ. ಯಾರೂ ನನ್ನ ಕಡೆ ಅಷ್ಟು ಲಕ್ಷ್ಯವಹಿಸಿದಂತೆ ಕಂಡುಬರಲಿಲ್ಲ! ಆ ಸಂದರ್ಭದಲ್ಲಿಯೇ, ಒಬ್ಬ ತಾತ... ತನ್ನ ಒಂದು ಕಾಲನ್ನ ಎಳೆಯುತ್ತಾ... ಹಿಂದೆ-ಮುಂದೆ ನೋಡುತ್ತಾ... ಸೀದಾ ಬಂದು ನನ್ನ ಪಕ್ಕದಲ್ಲಿಯೇ ಬಂದು ಕುಳಿತುಕೊಂಡ. ಒಮ್ಮೆ ನನ್ನ ನೋಡಿ ನಸುನಕ್ಕ ಕೂಡ!! ಆ ಅಪರಿಚಿತ ಮುಖದ ನಗುವಿನ ಹಿಂದೆ ಯಾವ ಭಾವ ಅಡಗಿತ್ತೋ...?? ನಾನರಿಯೇ! ಲೇಡಿಸ್ ಸೀಟುಗಳಲ್ಲಿ ಕೆಲವೇ-ಕೆಲವು ಮಾತ್ರಾ "ಸೀಟು"ಗಳು ಆಸೀನವಾಗಿದ್ದವು.....!! ಬಸ್ಸು ಹೊರಟಿತು, ಪ್ರತಿ ಸ್ಟಾಪಿನಲ್ಲೂ ಇಳಿಸಿಕೊಳ್ಳುತ್ತಾ, ಹೇರಿಸಿಕೊಳ್ಳುತ್ತಾ ಸಾಗುತಿತ್ತು. ಖಾಲಿಇರುವ ಸೀಟುಗಳು ತುಂಬುತ್ತಾಬಂದು, ಕೆಲವು ಅಂಗನೆಯರು ಬಂದು ನಿಂತುಕೊಂಡರು. ಆದರೂ ನಾವುಗಳು ಕುಳಿತೇ ಇದ್ದೆವು. ನಮ್ಮಲ್ಲಿ ಬಂದು ಸೀಟು ಬಿಟ್ಕೊಡಿ ಎಂದು ಯಾರೂ ಕೇಳಿರಲಿಲ್ಲ!! ಕೇಳಿದರೂ ನನ್ನ ಪಕ್ಕ ಕುಳಿತ ತಾತನದು ಸುಮಾರು ಒಂಟಿಕಾಲೇ ಆದ್ದರಿಂದ, ಅವನನ್ನ ಎಬ್ಬಿಸುವ ಧೈರ್ಯಯಾರೂ ಮಾಡುವುದಿಲ್ಲ ಅಂದುಕೊಂಡಿದ್ದೆ. ಅವನನ್ನ ಎಬ್ಬಿಸಿದರೆ ತಾನೆ ನಾನು ಏಳಲಿಕ್ಕೆ ಅವಕಾಶವಾಗುವುದು!! ನಮ್ಮನ್ನ ನೋಡಿ ಆಚೆತಿರುಗಿಸಿಕೊಂಡ ಕಣ್ಣುಗಳನ್ನೂ, ಎದ್ದೇಳಿ ಎಂದು ಧೈರ್ಯವಿಲ್ಲದ ಕಣ್ಣುಗಳನ್ನೂ ನಾನು ಗಮನಿಸುತ್ತಲೇ ಇದ್ದೇ. ಆ ಸಮಯದಲ್ಲೇ.... ಎರಡು ಸೀರೆಗಳನ್ನುಟ್ಟುಕೊಂಡಗೊಂಬೆಗಳು ಬಸ್ಸನ್ನ ಹತ್ತಿರುವುದು ನನ್ನ ಗಮನಕ್ಕೆ ಬರುತ್ತಿದ್ದಂತೆ, ತಾತನಲ್ಲಿ ಏನೋ ಹೇಳುತ್ತಿರುವುದೂ, ಆತನು ಏಳುತ್ತಿರುವುದೂ ಕೂಡ ನನಗೆ ಕಂಡುಬಂತು. ಇನ್ನೇನು... ನಾನು ಎದ್ದು ಸೀಟು ಬಿಟ್ಟು ಕೊಟ್ಟೆ. ಆದರೆ ಅವರಲ್ಲಿ ಒಬ್ಬಳು ಮಾತ್ರಾ, ನಾನು ಕುಳಿತಕಡೆ ಕುಳಿತಳು, ಪಕ್ಕದಲ್ಲಿ ಮತ್ತೆ ತಾತನೇ ಆಸೀನನಾದ. ಮತ್ತೊಬ್ಬಳು ಮುಂದೇನೇ ಅಡ್ಜೆಸ್ಟ್ ಆದಳು. ನಾನು ನಿಂತುಕೊಂಡೇ ಇದ್ದೆ!!  ಆ ಸಮಯದಲ್ಲಿಯೇ, ನಾನು ನಿಂತ ಪಕ್ಕದಲ್ಲಿಯೇ ಮತ್ತೊಂದು ಸೀಟು ಖಾಲಿಯಾದದ್ದ ನೋಡಿ ಮತ್ತೆ ಆಸೀನನಾದೆ. ಮತ್ತೇ ಅದೇ ಸಮಯದಲ್ಲಿ ವೃದ್ಧೆಯೊಬ್ಬಳು ಏರಿರುವುದನ್ನ ನೋಡಿ, ನನ್ನ ಕರ್ತವ್ಯಪಾಲಿಸಲೇ ಬೇಕಾಯಿತು!! ಮತ್ತೆ ಜೋಲುವ ಜೋಕಾಲಿ ನಾನಾದೆ. ಆದರೆ ಯಾವ ಜನುಮದ ಸುಕೃತದ ಫಲವೋ!! ನನ್ನ ಸೀಟಿನಲ್ಲಿ ಆಸೀನಳಾಗಿದ್ದ ಗೊಂಬೆ ಎದ್ದು ಇಳಿದು ಬಿಟ್ಟರೆ, ತಾತ ನನ್ನ ಸೀಟಿನತ್ತ ಜರುಗಿ ಕುಳಿತು, ನನಗೆ ಮತ್ತೆ ಕುಳಿತುಕೊಳ್ಳಲು ಅವಕಾಶಮಾಡಿಕೊಟ್ಟ. ಮತ್ತೆ ನಾನು ಸೀಟಿಗೆ ಮರಳಿದೆ. ಅದರ ಜೊತೆಗೆ ಅದೃಷ್ಟ ದೇವತೆ ನನ್ನ ಕಡೆಗೇ ಸಂಪೂರ್ಣವಾಗಿ ವೊಲಿದುಬಿಟ್ಟಳೂ ಕೂಡ!! ಹೇಗೆ ಅಂತೀರೋ?? ನಮ್ಮ ತಾತನ.. ಒಂದು ಕಾಲು ಬಗ್ಗಿಸಿಕೊಳ್ಳಲು ಆಗುತ್ತಿರಲಿಲ್ಲ, ಆ ಕಾಲನ್ನ ಅವನು ನೇರವಾಗಿಯೇ ಇಟ್ಟುಕೊಂಡಿದ್ದರಿಂದ ಸಂಪೂರ್ಣ ಸೀಟಿನ ಶೇಕಡಾ 70 ಭಾಗ ಅವನೇ ಆವರಿಸಿ ಕೊಂಡಿದ್ದ!.  ಅವನ ಪಕ್ಕ ನಾ ಕುಳಿತಿದ್ದೆ, ಆಮೇಲೆ ಏಷ್ಟೋ ಸ್ತ್ರೀಮಣಿಗಳು ಬಸ್ಸು ಏರಿದರು, ಆ ಸೀಟಿನಲ್ಲಿ ಮಾತ್ರಾ ಕುಳಿತುಕೊಳ್ಳಲು ಮನಸ್ಸು ಮಾಡಲಿಲ್ಲ, ಮಾಡಿದರೂ ನಮ್ಮ ತಾತನ.... ತೊಡೆಯ ಮೇಲೆ ಆಸೀನರಾಗಬೇಕಾಗಿತ್ತಷ್ಟೇ!!!!  ಉಳಿದ 30 ನನಗೆ ಬೇಕಷ್ಟಾಗಿತ್ತು! ಈ ರೀತಿಯಾಗಿ... ಸೀಟಿನ ಉದ್ದದ ಪ್ರಹಸನ ನಿಮಗೆ ಬೇಜಾರು ತರಿಸುತ್ತಾ ನಡೆಯುತ್ತಿದ್ದರೆ, ನಾನು ಮಾತ್ರಾ ಅಲ್ಲಿರಲೇ ಇಲ್ಲಾ.... ! ನನ್ನ ನಾ ಕಳೆದುಕೊಂಡು, ಸುಂದರ ಲೋಕದಲ್ಲಿ ವಿಹರಿಸುತಿದ್ದೆ. ಹಾಗೆ ಸ್ವಚ್ಛಂದವಾಗಿ ವಿಹರಿಸುವಂತೆ ಮಾಡಿದ್ದೇ... ನನ್ನ ಮುಂದೆ ಕುಳಿತ "ಮಾಯಾಂಗನೆ"!!  ಹಯ್ಯೋ... ಎದ್ದು ಹೋಗ್ಬೇಡಿ... ಊಟಕ್ಕೆ ಬಂದೋರು, ತಾಳಿ ಕಟ್ಟಿದ ತಕ್ಷಣ ಎದ್ದು ನಡೆದರೆ ಹೇಗೆ??? ಊಟವನ್ನೂ ಮುಗುಸಿಹೋಗಿ..... ಅಲ್ಲವೇ? ಹೆ ಹೆ ಹೆ............... ಜೊತೆಗೆ ಉಡುಗೊರೆ ಕೊಟ್ಟರೆ.... ನೆನಪಿನ ಕಾಣಿಕೆ (ಕಮೆಂಟ್).... ಎಂದಿಗೂ ಮರೆಯೋಲ್ಲಾ....!  

     
                            
                ರವಿ ಉದಯಿಸುತ್ತಿರುವಾಗ ಸೂರ್ಯಕಾಂತಿಗಳು, ತಾವರೆಗಳು ನಗಲು ಪ್ರಾರಂಭಿಸದರೆ, ಒಂದು ಪಾಳುಬೀಳತೊಡಗುತ್ತದಂತೆ!! ಅದ್ಯಾರು ಅಂತನಾ?? ಇಬ್ಬನಿಯಿಂದ ತೋಯ್ದು, ಅದನ್ನೇ ಮುತ್ತಿನಂತೆ ಜೋಡಿಸಿಕೊಂಡು ಸೌಂದರ್ಯವೇ ತಾನೆಂದು ನಲಿದು, ರವಿಯು ಮೇಲೇರುತಿದ್ದಂತೆ ತನ್ನೆಲ್ಲಾ ಅಂದವನ್ನೂ ಕರಗಿಸಿಕೊಂಡು ಪಾಳು ಬೀಳುವ ಜೇಡದ ಬಲೆ!!! ಅಂತಹ ಅದರಿಂದ ಕರಗಲ್ಪಟ್ಟ ಹನಿಗಳು.... ಸೀದಾ ನನ್ನ ಹೃದಯವನ್ನ ಪ್ರವೇಶಿಸಿದಾಗ ಉಂಟಾಗುವ ಆನಂದ ಕೊಡುವ ಸೌಂದರ್ಯ ರಾಶಿಯೇ..... ನನ್ನೆದುರಿನ ಸೀಟಿನಲ್ಲಿ ಕುಳಿತುಕೊಂಡಿದ್ದಳು!! ಇವಳ ಎದುರಿಗೆ ಆ ಕಲ್ಪನೆಯ ಮಾಯಾಂಗನೆಯೂ ಏನೂ ಅಲ್ಲ ಅಂತ ತೋರುತಿತ್ತು ನನಗೆ. ಛೇ...!! ಇಷ್ಟುದಿನ ನಿದ್ದೆಗಣ್ಣಿನಲ್ಲಿ... ಅಂಗನೆಯರನ್ನು ಕಂಡು ಭ್ರಮಾಲೋಕದಲ್ಲಿ ವಿಹರಿಸುತಿದ್ದೆ. ಆದರೆ ಈ ದಿನ, ವಾಸ್ತವವಾಗಿ ನನ್ನೆದುರಿಗೇ ಬಂದು ಕುಳಿತಿದ್ದಳು. ಯಾವ ಯಾವ ಜಾಗದಲ್ಲಿ ಯಾವ್ದ್ಯಾದ್ಯಾವ್ದು, ಎಷ್ಟೆಷ್ಟು ಇರ್ಬೇಕಿತ್ತೋ..... ಕಿಂಚಿತ್ತೂ ಕಮ್ಮಿಯಿಲ್ಲದೇ ನಿರ್ಮಿತಗೊಂಡಿದ್ದಳವಳು! ಬಹುಶಃ ಬ್ರಹ್ಮ ತಾಜಮಹಲನ್ನ ಕೆತ್ತಿಸಲು ನೇಮಿಸಿದ ಶಿಲ್ಪಿಗಳಿಗೇ, ಇವಳನ್ನ ಕಡೆಯಲು ಗುತ್ತಿಗೆ ಕೊಟ್ಟಿರಬೇಕು ಅನಿಸಿಬಿಟ್ಟಿತು. ಶಿಲ್ಪಿಗಳಾದರೋ... ಅವಳನ್ನ ತಾಜಮಹಲಿಗಿಂತಲೂ ಒಂದು ಕೈ ಜಾಸ್ತಿನೇ ಪೆಟ್ಟುಕೊಟ್ಟು ಅವಳನ್ನ ನಿರ್ಮಿಸಿರಬಹುದೇನೋ!! ಅವಳನ್ನು ನೋಡಿದ ಯಾವ ಬ್ರಹ್ಮಾಚಾರಿಯಾದರೂ.... ಕರಿಗಿ ಹೋಗಬಲ್ಲ!! ಅಂತದ್ದರಲ್ಲಿ ನಾನು ಕೂಡ ಕರಗಿದ್ದರಲ್ಲಿ ಅತಿಶಯೋಕ್ತಿ ಇಲ್ಲಾ!! ಇಷ್ಟು ಅನಿಸಿದ್ದು ನಾನು ಅವಳು ಬಸ್ಸು ಹತ್ತಿ ಬಂದ ತಕ್ಷಣ. ಅವಳು ಬಂದು ನನ್ನ ಮುಂದಿನ ಸೀಟಿನಲ್ಲಿ ನನಗೆ ಬೆನ್ನು ಮಾಡಿಕುಳಿತುಕೊಂಡಿದ್ದಳು. ನಾನು ನಿಂತುಕೊಂಡ ಸಮಯದಲ್ಲಿ....... ಅವಳ ಮುಖಾರವಿಂದದ ಮತ್ತೂ ಸೌಂದರ್ಯವನ್ನ ಸವಿಯಲು ನನ್ನಿಂದ ಸಾಧ್ಯವಾಯಿತು. ಅವಳ ಆ ಹಣೆಯಲ್ಲಿನ ಬಿಂದಿ ಚಂದಿರನನ್ನ ನೆನಪಿಸುತಿತ್ತು, ಹಣೆ ಆ ಚಂದಿರನ ಬೆಳದಿಂಗಳನ್ನ, ಆ ಬೆಳದಿಂಗಳಲ್ಲಿ ಸ್ವಚ್ಛಂದವಾಗಿ ವಿಹರಿಸುವ ಬಯಕೆಯುಂಟುಮಾಡುತಿತ್ತು. ಆ ಕಣ್ಣುಗಳು ಸರೋವರವನ್ನ ನೆನಪಿಸಿ.... ಅಲ್ಲಿ ಮೀನಿನಂತೆ ನಲಿಯುವಂತೆ ಮಾಡುತಿತ್ತು, ಆ ಮೂಗು.... ಹಿಮಾಲಯವನ್ನ ನೆನಪಿಸಿ.... ಅಲ್ಲಿಂದ ಜಾರುವ ಹಿಮಬಿಂದುವಂತೆ ನನ್ನನ್ನ ಜಾರುವಂತೆ ಮನವು ಪ್ರೇರೆಪಿಸುತಿತ್ತು, ಅವಳ ಆ ಕಪೋಲಗಳು.... ಮಾಗಿದ ಮಾವಿನ ಹಣ್ಣನ್ನ ನೆನಪಿಸಿ, ಕಚ್ಚಿತಿನ್ನುವಂತೆ ಮನವು ಕಾಡಿಸುತಿತ್ತು, ಆ ತುಟಿಗಳು.... ಕೆಂಪು ರೋಜಾವನ್ನು ನೆನಪಿಸಿ, ದುಂಬಿಯಾಗಿ ಅಲ್ಲಿರುವ ಮಧುವನ್ನ ಹೀರುವಂತೆ... ಮನವನ್ನ ಹುಚ್ಚೆಬ್ಬಿಸುತಿತ್ತು..... ಒಟ್ಟಿನಲ್ಲಿ ಆಗ ನಾನು.... ನಾ ನಾಗಿರಲಿಲ್ಲ......!! ಅವಳಲ್ಲಿಯೇ ಐಕ್ಯನಾಗಿಬಿಟ್ಟಿದ್ದೆ, ಅವಳ ಸ್ಟಾಪ್ ಬಂದು ಇಳಿದು ಹೋದಳು ಅವಳು. ಅವಳನ್ನ ಕಳೆದುಕೊಂಡ ನನ್ನೀಮನವು...... ಇಬ್ಬನಿಯ ಹನಿಯನ್ನ ಕಳೆದುಕೊಂಡ... ಪಾಳು ಬಲೆಯಾಗಿ ಜೋಲಾಡುತ್ತಿದೆ! ಇನ್ನು ಈ ಬಲೆಯಲ್ಲಿ ನನ್ನ ಹಣೆಬರಹವು...... ಯಾವ  ಮಾಯಾಂಗನೆಯ ಚಿಗುರುಬೆರಳಿನ ತುದಿಯಿಂದ ಹಾರಿದ ಹನಿಯಿಂದ ಮತ್ತೆ ಜೀವ ಕಳೆ ಬರುವಂತೆ ಮಾಡುವುದೋ ನಾ ಕಾಣೇ!!! ಹೂಂ........ : (