ಬುಧವಾರ, ಸೆಪ್ಟೆಂಬರ್ 5, 2012

"ಜನನಿ ತಾನೇ ಮೊದಲ ಗುರು"


"ರೊಂಯ್.....ರೊಂಯ್ ರೊಂಯ್ ರೊಂಯ್....."
         ನಾಲ್ಕು ವರ್ಷದ ಮಗ; ರಸ್ತೆಯಲ್ಲಿ ಅಮ್ಮ ಕೊಡಿಸಿದ ಪುಟ್ಟ ಕಾರಿನೊಡನೆ ಆಡುತ್ತಿದ್ದ. 
        ಎರಡು ವರ್ಷಕ್ಕೊಮ್ಮೆ ಬರುವ ಊರಿನ ಜಾತ್ರೆ ಅದ್ದೂರಿಯಿಂದಲೇ ಸಾಗುತ್ತಿದ್ದು, ಬಂದು ಹೋಗುವ ಜನ ಬಹಳೇ ಇದ್ದರು. ಆ ಸಮಯದಲ್ಲೇ ಎದುರು ಬಂದುನಿಂತ, ಅವನಿಗಿಂತ ಒಂದು-ಎರಡು ವರುಷದ ಹುಡುಗನನ್ನ; ಅವನು ಸುಮ್ಮನೇ ನಿಂತಿರುವುದನ್ನ ನೋಡಿ ತನ್ನ ಆಟದಲ್ಲಿ ಸೇರಿಸಿಕೊಂಡ. ಮಗ ಆಟವೇ ಆತನಾಗಿದ್ದನೋ ಎಂಬಂತೆ ಆತನೊಟ್ಟಿಗೆ ಆಟದಲ್ಲೇ ಮೈ-ಮರೆತ. ಕೆಲವು ಸಮಯ ಜೊತೆ ಸೇರಿ ಆಡುತ್ತೇ ಇರುವಂತಹ ಹುಡುಗ ಮಗನ ಕೈಯಲ್ಲಿರುವ ಕಾರನ್ನ ಕಸಿದುಕೊಂಡಿದ್ದೇ; ಒಂದೇ ಓಟ! ಮಗನಾದರೋ ಅವನನ್ನ ಅಟ್ಟಿಸಿ ಹಿಡಿಯಲು ಅಸಹಾಯಕನಾಗಿ, ಅಳುತ್ತಾ ಅಮ್ಮನಲ್ಲಿಗೆ ಬಂದ. 
         ಕಾಲಿ ಕೈಯಿಂದ, ಕಣ್ಣಿನ ತುಂಬಾ ನೀರನ್ನ ತುಂಬಿಕೊಂಡು ಬಂದ ಮಗ, ಬಿಕ್ಕಿ ಬಿಕ್ಕಿ ಅಳುತ್ತಾ ನಡೆದ ವಿಷಯವನ್ನ ಹೇಳಲು ಪ್ರಯತ್ನಿಸುತ್ತಾ, ಪೂರ್ತಿಗೊಳಿಸಲಾಗದೇ ಜೋರಾಗಿ ಅಳತೊಡಗಿದ. ವಿಷಯವನ್ನ ಅರ್ಥಮಾಡಿಕೊಂಡ ಅಮ್ಮ ಮಗನನ್ನ ಸಮೀಪ ಕರೆದು, ಮಡಿಲಲ್ಲಿ ಕುಳ್ಳಿರಿಸಿ, ಕಣ್ಣೀರನ್ನು ಒರೆಸುತ್ತಾ ಸಾಂತ್ವಾನದ ಧನಿಯಲ್ಲಿ, "ಯಾಕಪ್ಪಾ ಅಳುವುದು? ಹೋದಿದ್ದು ಹೋದದ್ದಾಯಿತಲ್ಲಾ! ಹೊಸತೊಂದು ತಂದರಾಯಿತು. ಅಷ್ಟಕ್ಕೇ ಯಾಕಿಷ್ಟು ಅಳುವುದು? ಬಾ ಇನ್ನೊಂದು ಕೊಡಿಸುತ್ತೇನೆ" ಎನ್ನುತ್ತಾ ಮತ್ತೆ ಜಾತ್ರೆಯ ಪೇಟೆಗೆ ಕರೆದೊಯ್ದು, ಹೊಸಕಾರನ್ನ ತೆಗೆಸಿ, ಮಗನ ಕೈಯಲ್ಲಿ ಇಡುತ್ತಾ, ಕಿಲ-ಕಿಲ ನಗುವನ್ನೂ ಮಗುವಿನ ಮುಖದಲ್ಲಿ ತುಂಬಿದಳು.
"ದಾರಿಯಲ್ಲಿ ಸಾಗುವವರನ್ನ ಆಟಕ್ಕೆ ಸೇರಿಸಿಕೊಂಡ ನಂತರ, ಇನ್ನಾದರೂ ಸ್ವಲ್ಪ ಜಾಗೃತೆಯಿಂದಿರು" ಎನ್ನುತ್ತಾ, ನಗು ಮುಖದಿಂದಲೇ ಮತ್ತೆ ಮಗನನ್ನ ಆಟಕ್ಕೆ ಕಳುಹಿಸಿದಳು.
                                                                                 *****
"ತಮಾ..."
".........................."
"ಏ ತಮಾ.........."
"ಏನಮ್ಮಾ...?"
"ಮನೆಗೆ ಬಾರೋ..."
"ಇನ್ನೊಂದು ಸ್ವಲ್ಪಹೊತ್ತು ಆಡಿ, ಬರುತ್ತೀನಮ್ಮಾ"
"ಆಡಿದ್ದು ಸಾಕು, ಬಾ ಬೇಗ"
        "ಊ ನ್ಹೂಂ... ಈಗ ಬರಲ್ಲ" ಎಂದಿದ್ದೇ ತಡ, ರಪ್ಪನೇ ಬೆನ್ನಿಗೊಂದು ಏಟು ಬಿದ್ದದ್ದು, ಅದರ ಬೆನ್ನಹಿಂದೆ-ಹಿಂದೆಯೇ ಇನ್ನೂ ನಾಲ್ಕು ಏಟು ರಫ-ರಫನೇ ಬಿದ್ದದ್ದೂ ಆಯಿತು. ದರ-ದರನೇ ಅಮ್ಮ ಮಗನನ್ನ ಮನೆಗೆ ಎಳೆದೊಯ್ದು, ಬಿಟ್ಟಳು.
ಚಿಕ್ಕವನಾಗಿದ್ದಾಗಿಂದ ಹಿಡಿದು ಈಗಿನ ಒಂಬತ್ತು ವಯಸ್ಸಿನ ವರೆಗೂ ಅಮ್ಮನ ಕೈಯಿಂದ ಏಟು ತಿಂದ ದಾಖಲೆಯೇ ಇಲ್ಲ. ಆದರೆ ಈಗ ಮೊದಲಬಾರಿ ಅಮ್ಮ  ತನ್ನ ಕೈರುಚಿ ಏಟಿನ ಮೂಲಕ ತೋರಿಸಿದ್ದಳು. ಬೆನ್ನು ಚುಮು ಚುಮುಗುಡುತ್ತಿತ್ತು. ಅಮ್ಮನ ಹತ್ತಿರ ಏಟು ತಿಂದೆನಲ್ಲ ಎಂದು ಮನಸ್ಸು ನೋಯುತಿತ್ತು. ಹಾಗೇ ಕೆಲವು ದಿನಗಳಲ್ಲಿಯೇ ಏಟಿನ ನೋವು ಮರೆಯಾಯಿತು. ಆದರೆ ಹೊಡೆಸಿಕೊಂಡದ್ದು ಮಾತ್ರಾ ಮನಸ್ಸು ಮರೆತಿರಲಿಲ್ಲ; "ಮೊದಲ ಬಾರಿ ಹೊಡೆಸಿಕೊಂಡ ಏಟು ಹೇಗೆ ತಾನೇ ಮರೆಯಲು ಸಾಧ್ಯ? ಮತ್ತಲ್ಲದೇ ಅದೇ ಮೊದಲನೆಯದು ಮತ್ತು ಕೊನೆಯದೂ ಕೂಡ. ಅದೂ ಅಲ್ಲದೇ, ಕಾರಣವಿಲ್ಲದೇ ಏಟು ತಿಂದದ್ದು ಬೇರೆ! ಪೆಟ್ಟು ತಿನ್ನುವಂತಹ ಕೆಲಸ ಏನು ಮಾಡಿದ್ದೆ ನಾನು?", ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಆಗಾಗ ಮೂಡುತ್ತಾ ಮರೆಯಾಗುತಿತ್ತು. 
            ಮನಸ್ಸು-ವಯಸ್ಸು ಬಲಿತ ಮೇಲೆ ಅಮ್ಮನನ್ನೇ ಪ್ರಶ್ನಿಸಿದ ಮಗ, "ಅಮ್ಮಾ, ಆ ದಿನ ನಿನಗೆ ನೆನಪಿದೆಯೇ? ನೀನು ನನಗೆ ಮೊದಲಬಾರಿ ಹೊಡೆದಿದ್ದು. ಯಾಕಮ್ಮಾ ಅವತ್ತು ನನಗೆ ಹೊಡೆದಿದ್ದು? ನಾನು ಆಟವಾಡುತ್ತಿದ್ದದ್ದು ತಪ್ಪಾಗಿತ್ತಾ?"
ಅಮ್ಮ ಹೇಳಿದಳು," ಇಲ್ಲಪ್ಪಾ ನಿನ್ನದು ತಪ್ಪು ಏನೂ ಇಲ್ಲಾ. ಆ ದಿನದ ಸಂದರ್ಭ ನನಗೆ ಹಾಗಿತ್ತು. ನಾವು ಇರುವುದೇ ಬೇರೆಯವರ ಮನೆಯಲ್ಲಿ. ಆ ಮನೆಯವರು ಆ ದಿನ ನಿನಗೆ ಬಯ್ಯುತ್ತಿದ್ದರು, ’ಇಡೀ ದಿನ ಆಟವಾಡುತ್ತಿರುತ್ತಾನೆ, ಒಂದು ಕಡ್ಡಿ ಕೆಲಸ ಮಾಡಲ್ಲಾ, ಸುಮ್ಮನೇ ಕೂಳುದಂಡ’ ಹೀಗೆ... ಅವರು ನಿನಗೆ ಆಡುತ್ತಿರುವ ಬೈಗುಳದ ನೋವನ್ನ ನನ್ನ ಹತ್ತಿರ ತಡೆಯಲಾಗಲಿಲ್ಲ. ಅದನ್ನ ಹೇಗಾದರೂ ತೀರಿಸಿಕೊಳ್ಳಬೇಕಾಗಿತ್ತಲ್ಲ, ಅದಕ್ಕೇ ನಿನಗೆ ಹೊಡೆದೆ. ನನ್ನ ನೋವನ್ನ ತೋರಿಸಿಕೊಳ್ಳಲು ನನಗಾದರೂ ಮತ್ಯಾರಿದ್ದರೋ?"
                                                                         ******
ಮಗ ಮತ್ತೂ ದೊಡ್ಡವನಾಗಿದ್ದ. 
          ಒಂದು ದಿನ ಜೇಬಿನೊಳಗಿರುವ ಹಣವಿದ್ದ ಪರ್ಸನ್ನ ಕಳೆದುಕೊಂಡು ಬಂದಿದ್ದ. ಮನೆಯಲ್ಲಿರುವ ಅಮ್ಮನಿಗೆ ಈ ವಿಷಯ ಹೇಳಿರಲೇ ಇಲ್ಲ.(ಅಮ್ಮ ಸುಮ್ಮನೇ ಬೇಜಾರು ಮಾಡಿಕೊಳ್ಳುತ್ತಾಳೆಂದೋ, ಸುಮ್ಮನೇ ಅವಳಿಗೆ ಕಿರಿ-ಕಿರಿ ಯಾಕೆಮಾಡುವುದೆಂದೋ ಇರಬೇಕು ಅಥವಾ ಬೈಯ್ಯುತ್ತಾಳೆಂದೂ ಇರಬೇಕು!!) ಆದರೆ ಮಗನ ಗುಟ್ಟು ಮನೆಯಲ್ಲಿ ರಟ್ಟಾಗದೇ? ಅಮ್ಮನಿಗೆ ಹೇಗೋ ವಿಷಯ ಗೊತ್ತಾಗಿಬಿಟ್ಟಿತು. ಬಂದು ವಿಚಾರಿಸಿದಳು, 
"ಪರ್ಸ್ ಇಲ್ವಲ್ಲಾ, ಎಲ್ಲಿ?"
ವಿಷಯಗೊತ್ತಾಗಿ ಬಿಟ್ಟಿದೆ, ಇನ್ನು ನಿಜ ಹೇಳಬೇಕಾದ್ದೇ!
"ಕಳೆದು ಹೋಗಿದೇಮ್ಮಾ..."
"ಹಯ್ಯೋ... ಎಷ್ಟು ಹಣವಿತ್ತೋ...?"
ಇದ್ದದ್ದೂ ಸಾವಿರವೇ ಆದರೂ ಮಗ ತಮಾಷೆ ಮಾಡಲೆಂಬಂತೆ ನಗುತ್ತಾ, "ಇತ್ತು; ಒಂದು-ಎರಡು ಲಕ್ಷ"
ಆದರೆ ಅಮ್ಮ ಸೀರಿಯಸ್ ಆಗೇ ಇದ್ದಳು, "ಎಲ್ಲಿ ಹೋಗಿತ್ತು ನಿಂಗೆ ಬುದ್ಧಿ? ಸರಿಯಾಗಿ ಇಟ್ಟುಕೊಳ್ಳುವುದರ ಬಿಟ್ಟು?"
"ಆದದ್ದಾಯಿತಲ್ಲ ಅಮ್ಮಾ, ಮತ್ಯಾಕೆ ಅದು?"
"ಆದರೂ ಇರುವಷ್ಟು ದಿನ ಸರಿಯಾಗಿ ಇಟ್ಟುಕೊಂಡಿರಬೇಕು ತಾನೇ?"
        ಮಗನಿಗೆ ಕೋಪ ಎಲ್ಲಿತ್ತೋ... ಅಲ್ಲಿಯೇ ಇದ್ದ ತರಕಾರಿ ಬುಟ್ಟಿಯನ್ನ ಎತ್ತಿ ಅಮ್ಮನ ತಲೆಯಮೇಲೆ ಇಡುತ್ತಾ, "ಸರಿ ಹಾಗಿದ್ದರೆ, ಹೊತ್ತುಕೊಂಡೇ ಇರು, ಇರುವಷ್ಟು ದಿನ ಇಟ್ಟುಕೊಳ್ಳಬೇಕಷ್ಟೇ!?" ಎಂದ.
          ಅಮ್ಮ ಕಣ್ಣೀರು ಸುರಿಸುತ್ತಾ, ದೇವರ ಹತ್ತಿರ ಹೋಗಿ, "ಆಹಾ... ಎಂತಹ ಮಗನ್ನ ಕೊಟ್ಟಿರುವೆಯಪ್ಪಾ!?"ಎಂದು ಬೇಡಿಕೊಳ್ಳುತ್ತಿರುವಾಗ, ಮಗ ತಾನು ಮಾಡಿದ ಅವಿವೇಕಿ ಕೆಲಸ ನೆನಪಾಗಿ ಏನು ಮಾಡಲೂ ತೋಚದೇ ಅಳುವುದೋ... ಅಥವಾ ಮಂಕು ಮುಖಮಾಡಿಕೊಂಡು ಸುಮ್ಮನೇ ಕುಳಿತುಕೊಳ್ಳುವುದೋ, ಏನೊಂದೂ ತೋಚದೇ... ಸುಮ್ಮನೇ ನಗೆಯಾಡಿ ಸಂದರ್ಭವನ್ನ ತಿಳಿಮಾಡಲು ಪ್ರಯತ್ನಿಸುತ್ತಿದ್ದ!
                                                                       
*****
           
              ಇಷ್ಟೆಲ್ಲಾ ಪೀಠಿಕೆಯನ್ನ ಹಾಕುತ್ತಾ ಈಗ ಪ್ರಮುಖ ವಿಷಯಕ್ಕೆ ಬರೋಣ. ಇದು ಸಾಲಾಗಿ; ಅನುಕ್ರಮದಲ್ಲಿ ನಡೆದ ಘಟನೆಗಳಲ್ಲ. ಆ ಆ ಸಂದರ್ಭದಲ್ಲಿ, ವಯಸ್ಸಿನಲ್ಲಿ ನಡೆದ ಘಟನೆಗಳಿವು. ನೆನಪೆಂಬ ಪುಸ್ತಕವನ್ನ ಬಿಡಿಸುತ್ತಾ, ಮಗುಚಿದ ಕೆಲವೇ-ಕೆಲವು ಹಾಳೆಗಳ ನಡುವಿನ ಕೆಲವು ಸಾಲುಗಳನ್ನ ಇಲ್ಲಿ ಮಾತ್ರಾ ಬರೆದಿದ್ದೇನೆ. ಇಲ್ಲಿ ಮಗನ ಪಾತ್ರ ನನ್ನದೇ! ಅಮ್ಮನ ಪಾತ್ರ!!? ಅದನ್ನ ಮತ್ತೆ ಹೇಳಬೇಕೆ? ನನ್ನ ಮುದ್ದು ಅಮ್ಮನದ್ದಲ್ಲದೇ ಮತ್ತೆಯಾರದ್ದು ತಾನೇ ಆಗಿರಲು ಸಾಧ್ಯ?
ಇವತ್ತು ಬೆಳಗ್ಗೆ ಎದ್ದಾಕ್ಷಣ, ಈ ದಿನ ಟೀಚರ್ಸ್ ಡೇ ಎನ್ನುವುದು ನೆನಪಿಗೆ ಬಂತು. ಆ ಸಂದರ್ಭದಲ್ಲಿಯೇ ನನ್ನ ಅಮ್ಮನೂ ನನ್ನ ಎದುರು ಹಾದು ಹೋದಳು. ಆ ಕ್ಷಣ ಅಮ್ಮನಿಗೇ ’ಟೀಚರ್ಸ್ ಡೇ’ ಯ ಶುಭಾಶಯ ತಿಳಿಸಿದೆ. ’ಇವತ್ತು ಟೀಚರ್ಸ್ ಡೇ, ಅಂತದ್ರಲ್ಲಿ ನನಗ್ಯಾಪಕ್ಕಾ ಶುಭಾಶಯ’ ಅಂತ ಕೇಳಿದ್ದಕ್ಕೆ, ನನ್ನ ಬಾಯಲ್ಲಿ ಬಂದ ವಾಕ್ಯ, "ಮನೆಯೇ ಮೊದಲ ಪಾಠಶಾಲೆ..." ಮುಂದುವರಿಸಿದ್ದು ಅಮ್ಮನೇ, ನಗುತ್ತಾ.... "ಜನನಿ ತಾನೇ ಮೊದಲ ’ಗುರು’...." ಎಂಬ ಮಾತನ್ನ!!
          ಪ್ರಕೃತಿಯೇ ನಮಗೆ ಅತೀ ದೊಡ್ಡಗುರು ಎಂದು ಅರಿತವರು ಬಲ್ಲರು. ದೇವನು ಪ್ರತಿಯೊಬ್ಬ ವ್ಯಕ್ತಿಗೂ ತಾನೇ ಎದುರು ನಿಂತು ಕಲಿಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿ, ಆ ಆ ಸಮಯದಲ್ಲಿ ಆತನು ಕಲಿಯ ಬೇಕಾದ ಜೀವನದ ಯಶಸ್ಸಿನ ಪಾಠಗಳನ್ನ ಅತೀ ಸೂಕ್ಷ್ಮವಾಗಿ ಪ್ರಕೃತಿಯಲ್ಲಿ ಅಡಗಿಸಿಟ್ಟು, ಆಯಾ ಸಂದರ್ಭದಲ್ಲಿ ಅದು ಹೊರಬರುವಂತೆ ಮಾಡುತ್ತಿರುತ್ತಾನೆ. ಅದನ್ನ ನಾವು ಅರ್ಥೈಸಿಕೊಳ್ಳಬೇಕಷ್ಟೇ. ಹೀಗೆ  ಅನೇಕ ಗುರುಗಳ ಮೂಲಕ ಸುಂದರ ಜೀವನವನ್ನ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ನನಗೆ ಅನೇಕ ಗುರುಗಳ ಸಮೂಹದಲ್ಲಿ ಮೊದಲ ಗುರುವಾಗಿ-ನನ್ನೊಟ್ಟಿಗೇ ಇರುವವಳು ನನ್ನ ಅಮ್ಮನೇ! ಅದಕ್ಕೇ ಮೊದಲ ಗುರುವಂದನೆ ನನ್ನ ಅಮ್ಮನಿಗೇ.
            ಮಕ್ಕಳು ದೊಡ್ಡವರಾದಂತೆ ಹೆತ್ತವರಿಗೆ ಅವರು ದೂರವಾಗುತ್ತಲೇ ಸಾಗುವ ಜಾಯಮಾನ ಈಗಿನ ಮಕ್ಕಳದು. ಮಾತು ಮಾತಿಗೆ, "ಅಪ್ಪಾ-ಅಮ್ಮಾ... ನನಗೆ ನೀವು ಏನು ಮಾಡಿದ್ದೀರಿ?" ಎನ್ನುವ ಪ್ರಶ್ನೆಯನ್ನ ಎದುರು ಮಂಡಿಸುತ್ತಾ ಅವರನ್ನ ನೋವಿಸುವುದೇ ಪರಿಪಾಠವಾಗಿದೆ. ’ಹೆತ್ತವರಿಗೆ ಹೆಗ್ಗಣವಾದರೂ ಮುದ್ದು’ ಎಂಬ ಮಾತು ಈಗ ಬದಲಾಗಿದ್ದು, ’ಹೆತ್ತವರಿಗೆ ಹೆಗ್ಗಣದ ಮದ್ದೇ’ ಎಂದರೆ ಅತಿಶಯೋಕ್ತಿಯಲ್ಲವೇನೋ!!
           ಹಿರಿಯರಾದ, ನನ್ನ ಗುರುಗಳೂ ಆದ, ಅಧ್ಯಾಪಕಾರಾಗಿಯೂ ಸೇವೆ ಸಲ್ಲಿಸುತ್ತಿರುವ ಶರ್ಮಕಾಕಾ ಹೇಳಿದ, ಹೆತ್ತವರ-ಮಕ್ಕಳ ಸಂಬಂಧದ ಬಗೆಗಿನ ಒಂದು ಘಟನೆ ಈ ಸಂದರ್ಭದಲ್ಲಿ ನೆನಪಾಗುತ್ತಿದೆ. 
        ಒಂದು ದಿನ, ಅವರ ಶಾಲೆಯಲ್ಲಿಯೇ ಓದುತಿದ್ದ ಹುಡುಗನೊಬ್ಬನ ತಂದೆತಾಯಿಗಳು ಇವರ ಬಳಿ ಬಂದು, ನಿಮ್ಮ ಶಾಲೆಯಲ್ಲಿ ಹಾಕಿಕೊಳ್ಳಲು ಸೂಚಿಸಿದ ಬೂಟಿನ ದರ ಬಲು ಹೆಚ್ಚಾದ್ದರಿಂದ, ಅದೇ ತರಹದ, ಇನ್ನೊಂದು ಕಂಪೆನಿಯ, ನಮ್ಮ ಅನುಕೂಲಕ್ಕೆ ತಕ್ಕ ಬೆಲೆಯ ಬೂಟನ್ನ ತರಿಸಿಕೊಟ್ಟರೆ; ನನ್ನ ಮಗ, "ನನಗೆ ಇದು ಬೇಡ, ಅದೇ ಬೇಕು!" ಎಂದು ಹಠ ಹಿಡಿದಾಗ. "ನಮ್ಮ ಹತ್ತಿರ ಅದನ್ನ ಕೊಡಿಸುವಷ್ಟು ಸಾಮರ್ಥ್ಯವಿಲ್ಲಪ್ಪ " ಎಂದು ದಯನೀಯವಾಗಿ ಹೇಳಿದಾಗ, ಮಗ ಹೇಳಿದ ಮಾತು ಕೇಳಿ, ಇವರಿಬ್ಬರೂ ದಂಗಾಗಿ ಕುಳಿತಿದ್ದುಬಿಟ್ಟರಂತೆ! ಅವನಾಡಿದ ಮಾತು, "ನನಗೆ ಬೂಟು ತಂದು ಕೊಡುವ ಸಾಮರ್ಥ್ಯ ನಿಮಗಿಲ್ಲಾ ಎಂದಾದರೆ, ನನ್ನನ್ನೇನು ನಿಮಗೆ ನಿದ್ದೆ ಬಂದಿಲ್ಲ ಎಂದು ಹುಟ್ಟಿಸಿದ್ದೋ?" ಎಂದು. "ಯಾವ ತಂದೆ-ತಾಯಿಗೆ ತಮ್ಮ ಮಗನಿಂದಲೇ ಇಂತಹ ಮಾತನ್ನ ಕೇಳುವುದಕ್ಕೆ ಸಾಧ್ಯ ಸಾರ್?" ಎನ್ನುತ್ತಾ ತಮ್ಮ ನೋವನ್ನ ತೋಡಿಕೊಂಡರಂತೆ. ಮತ್ತೂ ವಿಶೇಷದ ವಿಷಯವೇನಂದರೆ ಈ ಮಾತನಾಡಿದ್ದು ಕಾಲೇಜ್ ಹುಡುಗನಲ್ಲ. ಪ್ರೈಮರಿಯಲ್ಲಿ ಓದುತ್ತಿರುವ ಅತಿ ಚಿಕ್ಕ ವಯಸ್ಸಿನಲ್ಲಿಯೇ ಆಡಿದ ಮಾತು ಇದು!  
           ಈಗಿನ ಅತೀ ನೋವು ಕೊಡುವಂತಹ ವಾಸ್ತವ ಪರಿಸ್ಥಿತಿ ಇದು. ಆ ಹುಡುಗನ ಈ ಅತೀ-ಬುದ್ಧಿವಂತಿಕೆಗೆ ಯಾರನ್ನ ಹೊಣೆಯಾಗಿಸುವುದು? ಮಕ್ಕಳ ಉದ್ಧರಿಸುವ ಕಾರಣಗಳನ್ನ ಕೊಡುತ್ತಾ, ಈಗಿನ ಪೈಪೋಟಿತನವನ್ನೇ ಬಂಡವಾಳವಾಗಿರಿಸಿಕೊಂಡು ಹಗಲು ದರೋಡೆಗಿಳಿದಿರುವ ವಿದ್ಯಾದೇಗುಲಗಳನ್ನೋ? "ನಮಗೇನು ಇಲ್ಲಿ ಗಿಂಬಳಸಿಗುತ್ತೋ"ಎಂದು ಆಲೋಚಿಸುತ್ತಾ, ಸಂಬಳಕ್ಕೆ ತಕ್ಕಷ್ಟೇ ವಿದ್ಯೆಯನ್ನ ಕಲಿಸುವ ಗುರುವನ್ನೋ? ಸಲ್ಲದ ವಿಷಯವನ್ನ ಅತೀ ರಂಜಕವಾಗಿ ತೋರಿಸಿ ಮುಗ್ಧಮನಸ್ಸಿನೊಡನೆ ಆಟವಾಡುವ ಸಮಾಜದ ಮಾಧ್ಯಮಗಳನ್ನೋ? ಮುದ್ದು ಮನಸ್ಸಿನ, ಯಾವುದು ಕೆಟ್ಟದ್ದು, ಒಳ್ಳೇಯದು ಎಂದು ಗುರುತಿಸಲು ಸಾಧ್ಯವಾಗದೇ; ಕೆಟ್ಟದ್ದನ್ನೇ ಒಳ್ಳೆಯದೆಂದು ಭಾವಿಸಿ, ಅದನ್ನೇ ತಮ್ಮದಾಗಿಸಿಕೊಳ್ಳುವ ಮಕ್ಕಳನ್ನೋ? ಅಥವಾ ಮಕ್ಕಳು ಕೇಳಿ-ಕೇಳಿದ್ದನ್ನೆಲ್ಲಾ ಕೊಡಿಸಲು ಸಾಧ್ಯವಾಗದೇ, ಮಕ್ಕಳು ಹೇಳುವ ಕಠೋರ ನುಡಿಗಳನ್ನೆಲ್ಲಾ ಕೇಳುತ್ತಾ ಕೈ-ಚೆಲ್ಲಿ ಕುಳಿತುಕೊಳ್ಳುವ ಪಾಲಕರನ್ನೋ? ಇಲ್ಲಿ ಹೊಣೆಗಾರಿಕೆಯನ್ನ ತಮ್ಮಮೇಲೆ ಹಾಕಿಕೊಂಡು, ತಪ್ಪನ್ನ ತಿದ್ದಿಕೊಳ್ಳುವ-ತಿದ್ದುವ ಕೆಲಸವನ್ನ ಮಾಡುವವರೂ ಅತೀ ವಿರಳರೇ!
          ಏನೇ ಆಗಲಿ, ನನ್ನ ಅಮ್ಮ ಮಾತ್ರಾ ತನ್ನ ಜವಾಬ್ಧಾರಿಯನ್ನ ನನಗೆ ಚಾಚೂ ತಪ್ಪದೇ ಮಾಡಿಮುಗಿಸಿದ್ದಾಳೆ. ಮುದ್ದು ಮಾಡುವಲ್ಲಿ ಮುದ್ದುಮಾಡಿ, ಕಠೋರದ ಸಮಯದಲ್ಲಿ, ಹಟದಿಂದಲೇ ನನ್ನನ್ನ ಸರಿದಾರಿಯಲ್ಲಿ ನಡೆಸಿ-ಬೆಳೆಸಿದ್ದಾಳೆ. ಅಮ್ಮ ನನಗೆ ಏನೇನೋ ಕೊಡಿಸಿದ್ದಿಲ್ಲ! ಬದಲು ಬದುಕುವ ಪಾಠವನ್ನ ಪರಿ-ಪರಿಯಾಗಿ ಕೈ ಹಿಡಿದು ಕಲಿಸಿ, ನಡೆಸಿದ್ದಾಳೆ. ತನಗಿಲ್ಲದಿದ್ದರೂ, ತನಗೆಂದು ಕೊಟ್ಟಿದ್ದನ್ನ ಮಗನಿಗೆಂದು ತೆಗೆದಿರಿಸಿ ನನ್ನ ದಿನಗಳ ಹಸಿವನ್ನ ಇಂಗಿಸಿದ್ದಾಳೆ. ಸಮಯದಲ್ಲಿ ತಿಳಿಹೇಳಿ ನೋವನ್ನ ಮರೆಸಿದ್ದಾಳೆ. ಕಷ್ಟವನ್ನ ಸಹಿಸುವುದನ್ನು ಕಲಿಸಿದ್ದಾಳೆ. ಸಂಬಂಧಗಳನ್ನ ಪ್ರೀತಿಸುವುದನ್ನ-ಗೌರವಿಸುವುದನ್ನ ನನಗೇ ಧಾರೆಯೆರೆದಿದ್ದಾಳೆ. ನನ್ನ ಸುಖೀ ಜೀವನಕ್ಕೆ ತಕ್ಕ ವಾತಾವರಣವನ್ನ ಕಲ್ಪಿಸಿಕೊಟ್ಟಿದ್ದಾಳೆ. ನನಗೆ ಮತ್ತೇನು ತಾನೇ ಬೇಕು?
          ಆದರೆ, "ಅದೇ ಮಗ ಇಂದು ದೊಡ್ಡವನಾಗಿದ್ದಾನೆ! ಅದೇ ಅಮ್ಮನ ಪ್ರೀತಿ ಇಂದು ಅತೀ ಅನ್ನಿಸುತ್ತಿದೆ!! ನನಗೆ ಎಲ್ಲವೂ ತಿಳಿದಿದೆ ಎನ್ನುವ ಅಹಂ ಅವನ ಮನಸ್ಸಿನಲ್ಲಿ ಮನೆಮಾಡಿ, ಮತ್ತೆ-ಮತ್ತೆ ಅವಳಿಗೆ ಕಠೋರ ಮಾತುಗಳನ್ನಾಡಿ ನೋವಿಸುತ್ತಿರುತ್ತಾನೆ! ಅಮ್ಮಾ... ನಿನ್ನ ಮಗ ಹೇಗೆಂಬುದು ನಿನಗೇ ಗೊತ್ತಲ್ಲಾ... ಹಾಗೇ ಮಾಡಿದ್ದಾಗಲೆಲ್ಲಾ ಕ್ಷಮಿಸಿಬಿಡಮ್ಮಾ... ನೀನೇ ತಾನೇ ನನ್ನ ಮೊದಲ ಗುರು. ಗುರುವಾದವನು ತನ್ನ ಶಿಷ್ಯನ ತಪ್ಪುಗಳನ್ನೆಲ್ಲಾ ತಿದ್ದಿ-ತೀಡಿ ಸನ್ಮಾರ್ಗದಲ್ಲಿ ನಡೆಸುತ್ತಾನೆ. ಅದರಲ್ಲೂ ನೀನೇ ನನಗೆ; ಅಮ್ಮನೊಟ್ಟಿಗೆ-ಗುರುವಾಗಿಯೂ ನನ್ನನ್ನ ನಡೆಸುತ್ತಿದ್ದೀ. ನಿನಗೆ ಎಷ್ಟು ಧನ್ಯವಾದಗಳನ್ನ ಅರ್ಪಿಸಲೋ ನಾನರಿಯಲಾರೆ. ಮತ್ತೊಮ್ಮೆ ನಿನಗೇ ನಾನು ಮೊದಲು... ಶಿಕ್ಷಕರ ದಿನಾಚರಣೆಗೆ ಶುಭಾಶಯವನ್ನ ಹೇಳುತ್ತಿದ್ದೇನೆ.
"ಹ್ಯಾಪೀ ಟೀಚರ್ಸ್ ಡೇ... ಅಮ್ಮಾ..."
          ನನ್ನ ಈಗಿನ ಉತ್ತಮ ಪರಿಸ್ಥಿತಿಗೆ ಕಾರಣೀ ಭೂತರಾಗಿರುವ- ಆಗುತ್ತಲೂ ಇರುವ ಎಲ್ಲಾ ಗುರುವಿನ ಸಮೂಹಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯವನ್ನ ತಿಳಿಸುತ್ತಿರುವೆ.


ನನ್ನ ಅಮ್ಮ.